ಧಾರವಾಡ : ಜಿಲ್ಲಾಧಿಕಾರಿ ಸರಕಾರಿ ನಿವಾಸದ ಆವರಣದಲ್ಲಿ ಬೆಳೆಯಲಾಗಿದ್ದ ಶ್ರೀಗಂಧದ ಮರವೊಂದನ್ನು ಕತ್ತರಿಸಿ ತೆಗೆದುಕೊಂಡು ಹೋಗಲಾಗಿದೆ.
ರವಿವಾರ ರಾತ್ರಿಯಿಂದ ಸೋಮವಾರ ಬೆಳಗಿನ ಜಾವದವರೆಗೆ ಮರವನ್ನು ಕತ್ತರಿಸಿ ತೆಗೆದುಕೊಂಡು ಹೋಗಲಾಗಿದೆ. ಜಿಲ್ಲಾಧಿಕಾರಿಗಳ ಗೃಹದಲ್ಲಿ ಕೆಲಸ ಮಾಡುವ ಒಬ್ಬರು ಮರ ಕತ್ತರಿಸಿದನ್ನು ಕಂಡು ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದರು. ರೇಂಜ್ ಫಾರೆಸ್ಟ್ ಆಫೀಸರ್ ಆರ್ ಎಸ್ ಉಪ್ಪಾರ್ ಸ್ಥಳಕ್ಕೆ ಭೆಟ್ಟಿ ನೀಡಿ ಪೊಲೀಸ್ ದೂರು ಧಾಖಲಿಸಿದ್ದಾರೆ.
ಮರವನ್ನು ಗರಗಸದ ಮೂಲಕ ಬುಡದಿಂದಲೇ ಕತ್ತರಿಸಲಾಗಿದೆ. ಮರವನ್ನು ನೆಟ್ಟು ಸುಮಾರು 20ವರುಷವಾಗಿರಬಹುದೆಂದು ಅವರು ತಿಳಿಸಿದರು.
ಕೆಲವರುಷದ ಹಿಂದೆ ಬೆಳಗಾವಿ ಜಿಲ್ಲಾಧಿಕಾರಿಗಳ ಸರಕಾರಿ ಗೃಹದ ಆವರಣದಲ್ಲಿ ಬೆಳೆದಿದ್ದ ಶ್ರೀಗಂಧದ ಮರವನ್ನೂ ಇದೇತರಹ ಕತ್ತರಿಸಿ ತೆಗೆದುಕೊಂಡು ಹೋಗಲಾಗಿತ್ತು.