ಬೆಳಗಾವಿ : ದೇಶದಲ್ಲಿ ಸಾರಿಗೆ ಮೂಲಸೌಕರ್ಯ ಕ್ಷೇತ್ರದಲ್ಲಿ ಕಡಿಮೆ ಅವಧಿಯಲ್ಲಿ ಒಂದು ಮಹತ್ವಪೂರ್ಣ, ಗಮನಾರ್ಹವಾದ ಬದಲಾವಣೆ ಪ್ರಧಾನಿ ಮೋದಿ ಆಡಳಿತದಲ್ಲಿ ನಿತಿನ್ ಗಡ್ಕರಿ ಅವರ ನೇತೃತ್ವದಲ್ಲಿ ಆಗಿದೆ. ಹೀಗಾಗಿ ಬಹಳಷ್ಟು ಜನರು ನಿತಿನ್ ಗಡ್ಕರಿ ಅವರನ್ನು “ಗಡ್ಕರಿ ಅಲ್ಲ ಇವರು ರೋಡ್ಕರಿ,” ಕರೆಯುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಬಣ್ಣಿಸಿದರು.
ಬೆಳಗಾವಿಯಲ್ಲಿ ಐದು ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ “ಈ ದೇಶದಲ್ಲಿ ರಸ್ತೆಗಳು ಈ ಪ್ರಮಾಣದಲ್ಲಿ ಅಭಿವೃದ್ಧಿ ಆಗಿದ್ದು ನಾವು ಎಂದೂ ಕಂಡಿಲ್ಲ,” ಎಂದರು.
ಅಮೆರಿಕದ ಮಾಜಿ ಅಧ್ಯಕ್ಷ ಜಾನ್ ಕೆನಡಿ ಅವರು ಅಮೆರಿಕಾ ದೇಶ ಶ್ರೀಮಂತವಾಗಿ ಇರೋದಕ್ಕೆ ಅಲ್ಲಿನ ರಸ್ತೆಗಳೇ ಕಾರಣ ಯಾಕಂದರೆ ಅಲ್ಲಿನ ರಸ್ತೆಗಳು ಒಳ್ಳೆಯವಾಗಿವೆ ಎಂದರು. ಕೆನಡಿಯವರ ಈ ಹೇಳಿಕೆಯ ಪಾಲಕವೊಂದನ್ನು ಗಡ್ಕರಿ ತಮ್ಮ ಕಚೇರಿಯಲ್ಲಿ ಹಾಕಿದ್ದಾರೆ ಎಂದು ತಿಳಿಸಿದರು.
ಕೆನಡಿ ಹೇಳಿಕೆಯನು ಗಡ್ಕರಿ ಸಂಪೂರ್ಣವಾಗಿ ಅನುಷ್ಠಾನಕ್ಕೆ ತಂದಿದ್ದಾರೆ. ರಾಷ್ಟ್ರೀಯ ಹೆದ್ದಾರಿಗಳು ಹಿಂದೆ ಅಟಲ್ ಬಿಹಾರಿ ವಾಜಪೇಯಿ, “ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ” ಜಾರಿಗೆ ತಂದರು, ಅದನ್ನು ಇಂದು ಪ್ರಧಾನಿ ಮೋದಿ ಅವರು ಹಿಂದಿನ ಎಲ್ಲ ದಾಖಲೆಗಳನ್ನು ಮೀರಿ ಈ ಯೋಜನೆಗೆ ಹಣವನ್ನು ಕೊಟ್ಟಿದ್ದಾರೆ. ಈ ದೇಶದಲ್ಲಿ ಕೇವಲ ಶೇ.2.7ರಷ್ಟು ರಾಷ್ಟ್ರೀಯ ಹೆದ್ದಾರಿಗಳ ಜಾಲ ಇರುವಂತಹ ಕಾಲ ಅದರಲ್ಲಿ ಶೇ.40ರಷ್ಟು ದಟ್ಟಣೆ ಇರುತ್ತಿತ್ತು. ಅದನ್ನು ಅರ್ಥ ಮಾಡಿಕೊಂಡು ರಾಷ್ಟ್ರೀಯ ಹೆದ್ದಾರಿಗಳ ಜಾಲದ ಅರ್ಥವನ್ನೇ ಬದಲಾವಣೆ ಮಾಡಿದ್ದಾರೆ. 2014ರವರೆಗೆ ಮೋದಿ ಪ್ರಧಾನಿ ಆಗೋವರೆಗೂ, ನಿತಿನ್ ಗಡ್ಕರಿ ರಸ್ತೆಯ ಮಂತ್ರಿ ಆಗೋವರೆಗೆ ಈ ದೇಶದಲ್ಲಿ 91 ಸಾವಿರ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಇತ್ತು ಎಂದರು.
ರೋಡ್ ಅಂಡರ್‍ಪಾಸ್ ಮತ್ತು ರೈಲ್ವೇ ರೋಡ್ ಅಂಡರ್ ಪಾಸ್ ನಿರ್ಮಾಣಕ್ಕೆ ಎಲ್ಲ ಎಂಎಲ್‍ಎ, ಎಂಪಿಗಳು ಕೇಂದ್ರ ಸಚಿವರ ಬಳಿ ಮನವಿ ಸಲ್ಲಿಸುತ್ತಾರೆ. ಆದರೆ ಗಡ್ಕರಿ ಅವರು ಹೇಳಿದ್ದಾರೆ. ನ್ಯಾಶನಲ್ ಹೈವೇನಲ್ಲಿ ಬರಲಿ ಬರದೇ ಇರಲಿ ಅದೇ ರೀತಿ ಬೆಳಗಾವಿ ಸಿಟಿಯಲ್ಲಿ ಬರುತ್ತಿದ್ದರೂ ಕೂಡ ಈ ಎಲ್ಲಾ ರೋಡ್ ಅಂಡರ್ ಪಾಸ್‍ನ್ನು ಗಡ್ಕರಿ ಅವರು ಮಾಡಿಕೊಡುತ್ತಿದ್ದಾರೆ. ಇದು ಕರ್ನಾಟಕಕ್ಕೆ ಬಹು ದೊಡ್ಡ ಕೊಡುಗೆ ಎಂದು ಬಣ್ಣಿಸಿದರು.