ಬೆಳಗಾವಿ : ಸೋಮವಾರ ಬೆಳಗಾವಿಗೆ ಭೆಟ್ಟಿ ನೀಡಿದ್ದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಬೆಳಗಾವಿಯ “ಓಂ ನಮಯ್ ಶಿವಾಯ ಮೂವೀಸ್” ನ ಮುಖ್ಯಸ್ಥ ಡಾ. ಗಣಪತ್ ಪಾಟೀಲ್ ಸ್ವಾಗತಿಸಿದರು.
ನ್ಯೂಜಿಲ್ಯಾಂಡ್ ನಲ್ಲಿ ವೈದ್ಯಕೀಯ ವೃತಿಯಲ್ಲಿರುವ ಬೆಳಗಾವಿ ತಾಲೂಕು ಸುಳಗಾ ಗ್ರಾಮದ ಡಾ. ಪಾಟೀಲ್ ಸಾಹಿತ್ಯ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದು ತಾವೇ ಬರೆದ ಕಥೆಯೊಂದನ್ನು ಆದರಿಸಿ “ಮುಖವಾಡ ಇಲ್ಲದವನು,” ಎಂಬ ಕನ್ನಡ ಚಲನಚಿತ್ರವನ್ನು ನಿರ್ಮಿಸಿದ್ದರು. ಚಿತ್ರ ಚಿಂತಕರಲ್ಲಿ ಚರ್ಚೆಗೆ ವಿಷಯವಾಗಿತ್ತು. ಕೋವಿಡ್ ನಂತರ ಚಲನಚಿತ್ರ ಮಂದಿರಗಳು ಪುನಃ ಆರಂಭಗೊಂಡಾಗ ಅನೇಕ ಶ್ರೀಮಂತ ನಿರ್ಮಾಪಕರು ತಮ್ಮ ಚಿತ್ರಗಳನ್ನು ಬಿಡುಗಡೆಮಾಡಲು ಹಿಂಜರಿದಾಗ ಡಾ. ಪಾಟೀಲ್ ತಮ್ಮ “ಮುಖವಾಡ ಇಲ್ಲದವನು” ಬಿಡುಗಡೆ ಮಾಡಿದ್ದರು. “ಬುದ್ಧಿವಂತರಿಗೆ ಮಾತ್ರ” ಎಂಬಂತಿದ್ದ ಚಿತ್ರ ಹೆಸರು ಮಾಡಿತ್ತು.
ಅದರ ಮುಂದಿನ ಭಾಗವಾದ “ಮುಖವಾಡ ಇಲ್ಲದವನು 008” ಹೆಸರಿನ ಚಿತ್ರ ಆರಂಭಿಸಿದ್ದು ಬೆಳಗಾವಿಯಲ್ಲಿ ಪ್ರಥಮ ಹಂತದ ಶೂಟಿಂಗ್ ಮುಗಿಸಿದ್ದು ಹೈದ್ರಾಬಾದ್ ನ ರಾಮೋಜಿರಾವ್ ಫಿಲಂ ಸಿಟಿಯಲ್ಲಿ ಸೋಮವಾರದಿಂದ ಎರಡನೆಯ ಹಂತದ ಚಿತ್ರೀಕರಣ ಪ್ರಾರಂಭವಾಗಿದೆ.
ತಾವೂ ನಟಿಸುತ್ತಿರುವ ಈ ಚಿತ್ರದ ಕಥೆ ಕುರಿತು ಮುಖ್ಯಮಂತ್ರಿಗಳಿಗೆ ಮಾಹಿತಿ ಹಂಚಿಕೊಂಡ ನಿರ್ಮಾಪಕ ಡಾ. ಪಾಟೀಲ್ ಚಿತ್ರದಲ್ಲಿ ಪಾತ್ರವೊಂದರಲ್ಲಿ ತಾವು ಅಭಿನಯಿಸಲು ಸಿದ್ದರಿದ್ದರೆ ಅವಕಾಶವಿದೆ, ಅವಶ್ಯ ಬರಬಹುದು ಎಂದು ವಿನಂತಿಸಿದರು.