ಬೆಳಗಾವಿ : ಇಂದು ಗುರುವಾರ (March 17) ದಿವಂಗತ ಪುನೀತ್ ರಾಜ್ಕುಮಾರ್ ಅವರ 47 ನೇ ಹುಟ್ಟುಹಬ್ಬ. ಇನ್ನೊಂದೆಡೆ ಅವರ ಅಭಿನಯದ ಕೊನೆಯ ಚಿತ್ರ ‘ಜೇಮ್ಸ್’ ಬಿಡುಗಡೆಯಾಗಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಅವರ ಅಭಿಮಾನಿಯೊಬ್ಬರು ತಮ್ಮ ನೆಚ್ಚಿನ ನಟನ ಜನ್ಮ ದಿನವನ್ನ ವಿಶೇಷವಾಗಿ ಆಚರಿಸಿದ್ದಾರೆ.
ಇಲ್ಲಿನ ” ಚಿತ್ರಾ ” ಚಿತ್ರಮಂದಿರದಲ್ಲಿ 17ನೇ ನಂಬರ್ ಸೀಟ್ ಅಪ್ಪು ಅವರಿಗೆ ಮೀಸಲಿಟ್ಟು ಅದರ ಮೇಲೆ ಅವರ ಫೋಟೋ ಇಟ್ಟು, ಹಾರ ಹಾಕಿ ಪೂಜೆ ಸಲ್ಲಿಸುವ ಮೂಲಕ ಅಭಿಮಾನ ಮೆರೆದಿದ್ದಾರೆ. ಅಲ್ಲದೇ ಪಕ್ಕದ ಸೀಟ್ ನಲ್ಲಿ ಕುಳಿತು ಚಿತ್ರ ವೀಕ್ಷಿಸಿದ್ದಾರೆ. ಈ ವೇಳೆ, ಸಂತಸ ಹಂಚಿಕೊಂಡ ಅಭಿಮಾನಿ, ಅಪ್ಪು ನಮ್ಮ ಜೊತೆಗಿದ್ದಾರೆ, ಅವರ ಜೊತೆಗೆ ನಾವು ಚಿತ್ರ ವೀಕ್ಷಿಸುತ್ತಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಒಂದೆಡೆ, ಪುನೀತ್ ರಾಜ್ಕುಮಾರ್ ದೈಹಿಕವಾಗಿ ನಮ್ಮ ಜೊತೆ ಇಲ್ಲ ಎಂಬ ನೋವು ಅಭಿಮಾನಿಗಳ ಹೃದಯ ಹಿಂಡಿ ಹಿಪ್ಪೆ ಮಾಡುತ್ತಿದೆ. ಇನ್ನೊಂದೆಡೆ ‘ಜೇಮ್ಸ್’ ಸಿನಿಮಾ ನೋಡಿ ಕಣ್ತುಂಬಿಕೊಂಡ ಅಭಿಮಾನಿಗಳು ‘ಅಪ್ಪು’ ಅಭಿನಯಕ್ಕೆ ಚಪ್ಪಾಳೆ ತಟ್ಟಿ, ಶಿಳ್ಳೆ ಹೊಡೆದಿದ್ದಾರೆ.