- ನ್ಯಾಯಧೀಶರಿಗೆ ‘ವಾಯ್’ ಶ್ರೇಣಿ ಭದ್ರತೆ
ಬೆಂಗಳೂರು : “ತರಗತಿಗಳಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವ ಕುರಿತು ತೀರ್ಪು ನೀಡಿದ ನಮ್ಮ ಹೈಕೋರ್ಟನ ಮೂವರು ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆ ಹಾಕಿರುವ ದೇಶದ್ರೋಹಿಗಳನ್ನು ದಮನ ಮಾಡುವ ನಿಟ್ಟಿನಲ್ಲಿ ಪೊಲೀಸರಿಗೆ ಸೂಚನೆ ಕೊಟ್ಟಿದ್ದೇನೆ. ಆರೋಪಿಗಳನ್ನು ನಮ್ಮ ರಾಜ್ಯದ ವಶಕ್ಕೆ ತೆಗೆದುಕೊಳ್ಳಬೇಕು. ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದೇನೆ,” ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಕೆಲವು ದೇಶದ್ರೋಹಿ ಶಕ್ತಿಗಳು ಈ ದೇಶದ ವ್ಯವಸ್ಥೆಗೆ ಸವಾಲು ಹಾಕುವ ಯತ್ನ ಮಾಡಿದ್ದಾರೆ. ಹಿಂದೆಂದೂ ಕೂಡ ಈ ರೀತಿ ಆಗಿರಲಿಲ್ಲ. ನ್ಯಾಯಾಂಗದ ತೀರ್ಪನ್ನು ಎಲ್ಲರೂ ಒಪ್ಪಿಕೊಳ್ಳಬೇಕಾಗುತ್ತದೆ. ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಇನ್ನು ಬೆದರಿಕೆ ಹಾಕಿದವರ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೆ ವ್ಯವಸ್ಥೆ ವಿರುದ್ಧ ಎತ್ತಿಕಟ್ಟುವ ಕೆಲಸ ನಡೆಯುತ್ತದೆ. ಇದನ್ನು ದಮನ ಮಾಡಬೇಕಿದೆ. ಆರೋಪಿಗಳನ್ನು ನಮ್ಮ ರಾಜ್ಯದ ವಶಕ್ಕೆ ತೆಗೆದುಕೊಂಡು ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಬೆದರಿಕೆ ಹಾಕಿರುವ ವ್ಯಕ್ತಿಗಳ ವಿರುದ್ಧ ಯಾವ ಸೆಕ್ಷನ್ ಹಾಕಬೇಕೋ ಅದನ್ನು ಹಾಕಲು ಸೂಚನೆ ನೀಡಿದ್ದೇನೆ ಎಂದ ಸಿಎಂ ಬೊಮ್ಮಾಯಿ ಅವರು ಜಡ್ಜ್‍ಗೆ ವೈ ಕೆಟಗರಿ ಭದ್ರತೆ ನೀಡಲು ತೀರ್ಮಾನಿಸಿದ್ದೇವೆ.
ನ್ಯಾಯಮೂರ್ತಿಗೆ ಬೆದರಿಕೆ ಹಾಕಿ ಮೂರು ದಿನ ಕಳೆದಿದೆ. ಆದರೂ ಜಾತ್ಯಾತೀತವಾದಿಗಳು ಮೌನವಾಗಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದರು. ಅದೇ ರೀತಿ ಸರ್ಕಾರ ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತದೆ ಎಂದು ಎಚ್ಚರಿಸಿದರು.