ಹಾವೇರಿ: ಉಕ್ರೇನ್ ಮತ್ತು ರಷ್ಯಾ ಯುದ್ಧದಲ್ಲಿ ಮೃತಪಟ್ಟ ವಿದ್ಯಾರ್ಥಿ ನವೀನ್ ಪಾರ್ಥಿವ ಶರೀರವನ್ನ ಇಂದು, ಸೋಮವಾರ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕು ಚಳಗೇರಿಗೆ ಸ್ವಗ್ರಾಮಕ್ಕೆ ತೆಗೆದುಕೊಂಡು ಬಂದು ವೀರಶೈವ ಸಂಪ್ರದಾಯದ ವಿಧಿವಿಧಾನದಂತೆ ಕುಟುಂಬಸ್ಥರು ಅಂತಿಮ ಪೂಜಾ ಕಾರ್ಯಗಳನ್ನ ನೆರವೇರಿಸಿದರು.
ಕುಟುಂಬಸ್ಥರರಿಂದ ಪೂಜೆ ಸಲ್ಲಿಸಿದ ಬಳಿಕ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು. ಚಳಗೇರಿ ಗ್ರಾಮದಲ್ಲಿರುವ ನವೀನ್ ನಿವಾಸದಲ್ಲಿ ಸುಮಾರು ಅರ್ಧ ಗಂಟೆಗಳ ಕಾಲ ಕುಟುಂಬಸ್ಥರು ಪೂಜೆ ನೆರವೇರಿಸಿದರು.
ಮಾರ್ಚ್ 1 ರಂದು ಉಕ್ರೇನ್‌ನಲ್ಲಿ ಮೃತಪಟ್ಟಿದ್ದ ನವೀನ್ ಮೃತದೇಹ 21 ದಿನಗಳ ಬಳಿಕ ಸ್ವಗ್ರಾಮ ತಲುಪಿದೆ. ಮಗನ ಮೃತದೇಹ ಕಂಡು ತಂದೆ, ತಾಯಿ ಕಣ್ಣೀರಿಟ್ಟಿದ್ದಾರೆ. ನವೀನ್ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ದೇಹದಾನಕ್ಕೆ ನಿರ್ಧಾರ.
ಅಂತಿಮ ದರ್ಶನದ ಬಳಿಕ ಚಳಗೇರಿ ಗ್ರಾಮದಲ್ಲಿ ನವೀನ್ ಮೆರವಣಿಗೆ ನಡೆಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ನವೀನ್ ದೇಹದಾನಕ್ಕೆ ಪೋಷಕರು ನಿರ್ಧರಿಸಿರುವಂತೆ ಮೆರವಣಿಗೆ ಬಳಿಕ ದಾವಣಗೆರೆಯ ಎಸ್.ಎಸ್. ಮೆಡಿಕಲ್ ಕಾಲೇಜಿಗೆ ನವೀನ್ ದೇಹವನ್ನು ಹಸ್ತಾಂತರ ಮಾಡಲಾಗುತ್ತಿದೆ.
ಮಧ್ಯಾಹ್ನ 2 ಗಂಟೆ ವರೆಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಬಳಿಕ ಪಾರ್ಥಿವ ಶರೀರರವನ್ನು ದಾವಣಗೆರೆಯ ಎಸ್ಎಸ್ ವೈದ್ಯಕೀಯ ಕಾಲೇಜಿಗೆ ತೆಗೆದುಕೊಂಡು ಹೋಗಲಾಗುತ್ತದೆ.
ಇದಕ್ಕೂ ಮೊದಲು ನವೀನ್ ಪಾರ್ಥಿವ ಶರೀದ ಇಂದು, ಸೋಮವಾರ ರಾತ್ರಿ 3 ಗಂಟೆಯ ಹೊತ್ತಿಗೆ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪಾರ್ಥಿವ ಶರೀರವನ್ನು ಬರಮಾಡಿಕೊಂಡರು.