ಶಿವಮೊಗ್ಗ : “ಒಂದಿಲೊಂದು ದಿನ ದೆಹಲಿಯ ಕೆಂಪು ಕೋಟೆ ಮೇಲೆಯೂ ಕೇಸರಿ ಧ್ವಜ ಹಾರಿಸಿಯೇ ಹಾರಿಸುತ್ತೇವೆ,” ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.
ಮಾಧ್ಯಮಗಳ ಜೊತೆಗೆ ಮಾತನಾಡಿರುವ ಸಚಿವ ಈಶ್ವರಪ್ಪ ರಾಷ್ಟ್ರಧ್ವಜ ತೆಗೆದು ಕೇಸರಿ ಧ್ವಜ ಹಾರಿಸಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಸುಳ್ಳು ಹೇಳಿದ ಹಾಗೆ ಸುಳ್ಳು ಹೇಳಲು ನಾನು ತಯಾರಿಲ್ಲ. ಪ್ರಪಂಚದ ಎಲ್ಲಿ ಬೇಕಾದರೂ ಕೇಸರಿ ಧ್ವಜ ಹಾರಿಸುತ್ತೇವೆ. ಇವನು ಯಾರು ಕೇಳೊದಿಕ್ಕೆ. ಇವತ್ತಲ್ಲ ನಾಳೆ ಈ ದೇಶದಲ್ಲಿ ಹಿಂದೂ ಧರ್ಮ ಬರುತ್ತೆ ಆಗ ಕೆಂಪು ಕೋಟೆ ಮೇಲೆಯೂ ಕೇಸರಿ ಧ್ವಜ ಹಾರಿಸುತ್ತೇವೆ.
ಇಂದು ತ್ರಿವರ್ಣ ಧ್ವಜ ಇಡೀ ದೇಶದಲ್ಲಿ ರಾಷ್ಟ್ರಧ್ವಜ ಆಗಿದೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ. ಆ ರಾಷ್ಟ್ರಧ್ವಜಕ್ಕೆ ನಾವೆಲ್ಲಾ ಗೌರವ ಕೊಡುತ್ತೇವೆ ಎಂದರು.
ಇನ್ನು ಬರೀ ಸಿದ್ದರಾಮಯ್ಯ ಸುಳ್ಳುಗಾರ ಎಂದು ತಿಳಿದುಕೊಂಡಿದ್ದೇವು. ಇದೀಗ ಡಿ.ಕೆ.ಶಿವಕುಮಾರ್ ಸಿದ್ದರಾಮಯ್ಯರನ್ನು ಮೀರಿ ಸುಳ್ಳುಗಾರ ಆಗುತ್ತಿದ್ದಾರೆ. ಯಾವ ಧ್ವಜ ಸ್ತಂಭದಲ್ಲಿ ಬೇಕಾದ್ರೂ ಕೇಸರಿ ಧ್ವಜ ಹಾರಿಸಬಹುದು.
ಆದರೆ ಶಿವಮೊಗ್ಗದಲ್ಲಿ ರಾಷ್ಟ್ರಧ್ವಜ ತೆಗೆದು ಕೇಸರಿ ಧ್ವಜ ಹಾಕಿಲ್ಲ, ಹಾಕೋದಿಲ್ಲ. ಈ ಹಿಂದು ಮುಸ್ಲಿಂರಲ್ಲಿ ಈ ರೀತಿ ದ್ವೇಷವನ್ನು ಬೆಳೆಸಲು ರಾಷ್ಟ್ರಧ್ವಜವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಡಿಕೆಶಿಗಿಂತ ಜಾಸ್ತಿ ರಾಷ್ಟ್ರಧ್ವಜದ ಬಗ್ಗೆ ನಮಗೆ ಗೌರವವಿದೆ ಎಂದು ಸಚಿವ ಈಶ್ವರಪ್ಪ ತಿರುಗೇಟು ನೀಡಿದರು.