ನವದೆಹಲಿ : ಸೆಕ್ಸ್ ಸಿಡಿ ಪ್ರಕರಣದಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಕ್ಲೀನ್ ಚಿಟ್ ನೀಡಿದ್ದ ವಿಶೇಷ ತನಿಖಾ ತಂಡದ (ಎಸ್‌ಐಟಿ) ರಚನೆಯ ಔಚಿತ್ಯ ಪ್ರಶ್ನಿಸಿ ಅತ್ಯಾಚಾರ ಆರೋಪ ಮಾಡಿದ್ದ ಯುವತಿ ಈಗ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ.
ಮೇಲ್ಮನವಿಯ ವಿಚಾರಣೆಯು ಫೆಬ್ರುವರಿ 14ರಂದು ವಿಚಾರಣೆಗೆ ಬರಲಿದೆ. ದೂರಿನ ‘ತನಿಖೆ ‘ ನಡೆಸಿದ್ದ ಎಸ್ ಆಯ್ ಟಿ ‘ಅತ್ಯಾಚಾರ ಆರೋಪದ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ಕೊರತೆ ಇದೆ’ ಎಂದು ನಮೂದಿಸಿ ಬೆಂಗಳೂರಿನ ಒಂದನೇ ಜೆಸಿಎಂಎಂ ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್ ಸಲ್ಲಿಸಿತ್ತು.
‘ನೀರಾವರಿ ಸಚಿವರಾಗಿದ್ದ, ಶಾಸಕ ರಮೇಶ ಜಾರಕಿಹೊಳಿ, ವಿದ್ಯುತ್ ಸರಬರಾಜು ಇಲಾಖೆಯಲ್ಲಿ ಕೆಲಸದ ಕೊಡಿಸುವ ಭರವಸೆ ನೀಡಿ ನನ್ನನ್ನು ದೈಹಿಕವಾಗಿ ಬಳಸಿಕೊಂಡು ಅತ್ಯಾಚಾರ ಎಸಗಿದ್ದಾರೆ,’ ಎಂದು ಆರೋಪಿಸಿ ಯುವತಿ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ದೂರಿನ ಅನ್ವಯ ಸರ್ಕಾರ ರಚಿಸಿದ್ದ ಎಸ್‌ಐಟಿ ತನಿಖೆ ನಡೆಸಿ ವರದಿ ಸಲ್ಲಿಸಿತ್ತು. ಈಗ ಎಸ್‌ಐಟಿ ರಚನೆಯನ್ನೇ ಪ್ರಶ್ನಿಸಿ ಈಗ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿದೆ.
“ಸರ್ಕಾರವು ಸ್ವಯಂ ಪ್ರೇರಿತವಾಗಿ ಎಸ್‌ಐಟಿಯನ್ನು ರಚನೆ ಮಾಡಿಲ್ಲ. ಎಸ್‌ಐಟಿ ರಚನೆಯೇ ಸರಿ ಇಲ್ಲದಿರುವಾಗ ಆರೋಪಿಯು ನಿರ್ದೋಷಿ ಎಂಬ ವರದಿಯನ್ನು ಸಲ್ಲಿಸಿರುವುದನ್ನು ಒಪ್ಪಲು ಸಾಧ್ಯವಿಲ್ಲ,. ಆ ವರದಿಯ ಮೇಲೆ ನಮಗೆ ನಂಬಿಕೆ ಇಲ್ಲ,” ಎಂದು ಅರ್ಜಿದಾರ ಯುವತಿ ಹೇಳಿದ್ದಾರೆ.
ತನಿಖಾ ವರದಿಯನ್ನು ಒಂದನೇ ಜೆಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಎಸ್‌ಐಟಿಗೆ ಸೂಚಿಸಿ ಹೈಕೋರ್ಟ್ ನೀಡಿದ್ದ ಆದೇಶವನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.