ಹೆಣ್ಣು ಮಕ್ಕಳ ಶಿಕ್ಷಣ ಹೋರಾಟಗಾರ್ತಿ, ನೊಬೆಲ್ ಪ್ರಶಸ್ತಿ ಪುರಸ್ಕೃತೆ ಪಾಕಿಸ್ತಾನದ ಮಲಾಲಾ ಯೂಸುಫ್ ಝಾಯಿ ಕೂಡ ಕರ್ನಾಟಕದ ಹಿಜಾಬ್ ವಿವಾದದ ಬಗ್ಗೆ ಮಾತನಾಡಿದ್ದಾರೆ.
ಕರ್ನಾಟಕದಲ್ಲಿ ಹಿಜಾಬ್-ಕೇಸರಿ ಶಾಲು ತಾರಕಕ್ಕೇರಿದೆ. ಕಾಲೇಜು ಕ್ಯಾಂಪಸ್ ಒಳಗೆ, ಕ್ಲಾಸ್ರೂಮ್ನೊಳಗೆ ಹಿಜಾಬ್ ಹಾಕಿಕೊಂಡು ಬರಬೇಡಿ ಎಂದು ಹೇಳಿದ್ದಕ್ಕೆ ಮುಸ್ಲಿಂ ಹುಡುಗಿಯರು ಪ್ರತಿಭತಿಸುತ್ತಿದ್ದಾರೆ, ಪ್ರತಿಯಾಗಿ ಹಿಂದೂ ವಿದ್ಯಾರ್ಥಿಗಳು ಕೇಸರಿಶಾಲು ಹಾಕಿಕೊಂಡು ಬರುತ್ತಿದ್ದಾರೆ. ಮುಸ್ಲಿಂ ವಿದ್ಯಾರ್ಥಿನಿಯರಿಗೆ ಬೆಂಬಲವಾಗಿ ಕೆಲ ವಿದ್ಯಾರ್ಥಿಗಳು ನೀಲಿ ಬಣ್ಣದ ಶಾಲ್ ಹಾಕಿಕೊಂಡು ಬರುತಿದ್ದು “ಅವರು ಕ್ಲಾಸ್ರೂಂನಲ್ಲೂ ಧರ್ಮಾಚರಣೆ ಮಾಡುತ್ತಾರೆ ಎಂದಾದರೆ, ನಾವೂ ನಮ್ಮ ಧರ್ಮಾಚರಣೆ ಮಾಡುತ್ತೇವೆ,” ಎಂದು ಪಟ್ಟು ಹಿಡಿದಿದ್ದಾರೆ. ಒಟ್ಟಿನಲ್ಲಿ ಇದೀಗ ರಾಷ್ಟ್ರ-ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮಲಾಲಾ ಯೂಸುಫ್, “ಹಿಜಾಬ್ ಅಥವಾ ಶಿಕ್ಷಣ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವಂತೆ ಕಾಲೇಜು ಬಲವಂತ ಮಾಡುತ್ತಿದೆ. ಹಿಜಾಬ್ ಧರಿಸಿಬಂದಿದ್ದಾರೆ ಎಂಬ ಕಾರಣಕ್ಕೆ ಹೆಣ್ಣುಮಕ್ಕಳನ್ನು ಕ್ಲಾಸ್ ಒಳಗೆ ಬಿಡದೆ ಇರುವುದು ನಿಜಕ್ಕೂ ಭಯಾನಕ. ಹುಡುಗಿಯರು ಹೆಚ್ಚು ಬಟ್ಟೆ ಧರಿಸುವುದಕ್ಕೆ ಮತ್ತು ಕಡಿಮೆ ಬಟ್ಟೆ ಧರಿಸುವುದಕ್ಕೆ ಆಕ್ಷೇಪಣೆ ವ್ಯಕ್ತಪಡಿಸುವುದು ಯಾವಾಗಿನಿಂದಲೂ ಇದ್ದೇ ಇದೆ. ಆದರೆ ಹಿಜಾಬ್ ಧರಿಸಿ ಬರುತ್ತಾರೆಂದು ಮುಸ್ಲಿಂ ಮಹಿಳೆಯರನ್ನು ತುಚ್ಛವಾಗಿ ಕಾಣಬಾರದು,” ಎಂದು ಹೇಳಿದ್ದಾರೆ.
1997ರಲ್ಲಿ ಪಾಕಿಸ್ತಾನದ ಮಿಂಗೋರಾದಲ್ಲಿ ಜನಿಸಿರುವ ಮಾಲಾಲಾ ತಮ್ಮ ಚಿಕ್ಕವಯಸ್ಸಿನಿಂದಲೇ ಹೆಣ್ಣುಮಕ್ಕಳ ಶಿಕ್ಷಣ, ವಿದ್ಯಾಭ್ಯಾಸದ ಹಕ್ಕನ್ನು ಪ್ರತಿಪಾದಿಸುತ್ತ ಬಂದಿದ್ದಾರೆ. ಹೆಣ್ಣುಮಕ್ಕಳ ಶಿಕ್ಷಣದ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದಾರೆ. 2012ರಲ್ಲಿ ಅಂದರೆ ಅವರಿಗೆ ಕೇವಲ 11ವರ್ಷವಾಗಿದ್ದಾಗ ಒಮ್ಮೆ ಸಾರ್ವಜನಿಕವಾಗಿ ಹೆಣ್ಣುಮಕ್ಕಳ ಶಿಕ್ಷಣ ಹಕ್ಕಿನ ಬಗ್ಗೆ ಮಾತನಾಡುತ್ತಿದ್ದರು. ಆಗ ಅವರಿಗೆ ತಾಲಿಬಾನ್ ಉಗ್ರರು ಗುಂಡು ಹೊಡೆದಿದ್ದರು. ತಾಲಿಬಾನಿಗಳು ಮೊದಲಿನಿಂದಲೂ ಹೆಣ್ಣುಮಕ್ಕಳು ಶಿಕ್ಷಣ ಕಲಿಯುವುದನ್ನು ವಿರೋಧಿಸುತ್ತಲೇ ಇದ್ದಾರೆ. ಅಂಥ ತಾಲಿಬಾನಿಗಳ ಕ್ರೌರ್ಯಕ್ಕೂ ಹೆದರದೆ ಮಲಾಲಾ ನಿರ್ಭಿಡೆಯಿಂದ ಮಾತನಾಡಿದ್ದರು. ಅಂದು ಗುಂಡೇಟಿನಿಂದ ಗಾಯಗೊಂಡಿದ್ದ ಮಲಾಲಾರನ್ನು ಬರ್ಮಿಂಗ್ಹ್ಯಾಂ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು. ಗುಣಮುಖರಾದ ಬಳಿಕ ಕೂಡ ಅವರು ಹೆಣ್ಣುಮಕ್ಕಳ ಶಿಕ್ಷಣದ ಬಗೆಗಿನ ಹೋರಾಟವನ್ನೇ ಮುಂದುವರಿಸಿದ್ದಾರೆ. ಅದಾದ ಬಳಿಕ ಯುಕೆಯಲ್ಲಿಯೇ ವಾಸಿಸುತ್ತಿದ್ದಾರೆ.