ಬೆಂಗಳೂರು: ಬೆಳಗಾವಿ ಜಿಲ್ಲೆಯಲ್ಲಿ
ರಾಜ್ಯ ಸರಕಾರ ಕೈಕೊಳ್ಳಬೇಕಾದ
ಅಭಿವೃದ್ಧಿ ಕೆಲಸಗಳ ಬಗ್ಗೆ ಹಾಗೂ
ಜಿಲ್ಲೆಯ ಖ್ಯಾತ ಸಾಹಿತಿಗಳ,ಕಲಾವಿದರ
ಹೆಸರಿನಲ್ಲಿ ಟ್ರಸ್ಟಗಳನ್ನು ರಚಿಸಬೇಕೆಂಬ
ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ
ಕ್ರಿಯಾ ಸಮಿತಿ ಮತ್ತು ಹಿರಿಯ ಸಾಹಿತಿಗಳು
ಸೇರಿ ಸಲ್ಲಿಸಿದ ಬೇಡಿಕೆಗಳು ತಮ್ಮ
ಗಮನದಲ್ಲಿದ್ದು ಅವುಗಳನ್ನು
ಈಡೇರಿಸಲು ರಾಜ್ಯ ಸರಕಾರ
ಬದ್ಧವಿದೆಯೆಂದು ಮುಖ್ಯಮಂತ್ರಿ
ಶ್ರೀ ಬಸವರಾಜ ಬೊಮ್ಮಾಯಿ ಅವರು
ಇಂದು ರವಿವಾರ ಮುಂಜಾನೆ
ಬೆಂಗಳೂರಿನ ತಮ್ಮ ನಿವಾಸದಲ್ಲಿ
ಭರವಸೆ ನೀಡಿದರು.
ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ
ಶ್ರೀ ಅಶೋಕ ಚಂದರಗಿ ಅವರ
ನೇತೃತ್ವದ ಹೋರಾಟಗಾರರ ಮತ್ತು
ಹಿರಿಯ ರಂಗಕರ್ಮಿ ಶ್ರೀ ಬಿ.ಎಸ್.
ಗವಿಮಠ ಅವರ ನೇತೃತ್ವದ ಸಾಹಿತಿಗಳ
ನಿಯೋಗ ಬೊಮ್ಮಾಯಿ ಅವರನ್ನು
ಭೆಟ್ಟಿಯಾಗಿ ಮನವಿ ಸಲ್ಲಿಸಿದಾಗ
ಅವರು ಈ ಭರವಸೆ ನೀಡಿದರು.
ಬೆಳಗಾವಿ ಜಿಲ್ಲಾ ಮಟ್ಟದ
ಕಚೇರಿಗಳನ್ನು ಒಂದೇ ಕಟ್ಟಡದಲ್ಲಿ
ಸ್ಥಾಪಿಸಲು ಜಿಲ್ಲಾಧಿಕಾರಿಗಳ
ಕಚೇರಿಯ ಆವರಣದಲ್ಲಿಯೇ ಬಹುಮಹಡಿ
ಕಟ್ಟಬೇಕು, ಸಂಚಾರ ದಟ್ಟಣೆಯನ್ನು
ನೀಗಿಸಲು 4 ಕಿ.ಮೀ.ನಷ್ಟು ರಸ್ತೆ
ಮೇಲ್ಸೇತುವೆ ನಿರ್ಮಿಸಬೇಕು,
ರಾಮದುರ್ಗ ತಾಲೂಕಿನ ಶಬರಿಕೊಳ್ಳವನ್ನು
ಅಭಿವೃದ್ಧಿಪಡಿಸಿ ಪ್ರವಾಸಿ ಕೇಂದ್ರವನ್ನಾಗಿ
ಮಾಡಬೇಕು ಹಾಗೂ ಖ್ಯಾತ ರಂಗಕರ್ಮಿ
ದಿ.ಏಣಗಿ ಬಾಳಪ್ಪ,ಖ್ಯಾತ ಕಾದಂಬರಿಕಾರ
ದಿ.ಕೃಷ್ಣಮೂರ್ತಿ ಪುರಾಣಿಕ,ಖ್ಯಾತ
ಸಾಹಿತಿಗಳಾದ ದಿ.ಡಿ.ಎಸ್.ಕರ್ಕಿ
ದಿ.ಎಸ್.ಡಿ.ಇಂಚಲ ಹಾಗೂ ಖ್ಯಾತ
ಹಿಂದುಸ್ತಾನಿ ಗಾಯಕ ದಿ.ಕುಮಾರ
ಗಂಧರ್ವ ಅವರುಗಳ ಹೆಸರಿನಲ್ಲಿ
ಟ್ರಸ್ಟಗಳನ್ನು ರಚಿಸಿ ಅವೆಲ್ಲವೂ ಒಂದೇ
ಸೂರಿನಡಿ ಕಾರ್ಯ ನಿರ್ವಹಿಸುವಂತೆ
ಮಾಡಬೇಕು ಎಂದು ನಿಯೋಗದ ಸದಸ್ಯರು
ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು.
ಬೆಂಗಳೂರಿನ ಕನ್ನಡ ಪರ
ಹೋರಾಟಗಾರರಾದ ಸಿ.ಕೆ.ರಾಮೇಗೌಡ
ಶಂಕರ ಹೂಗಾರ, ಬೆಳಗಾವಿಯ
ಹೋರಾಟಗಾರಾದ ರಮೇಶ ಸೊಂಟಕ್ಕಿ
ಮೈನೋದ್ದೀನ್ ಮಕಾನದಾರ, ಶಿವಪ್ಪ
ಶಮರಂತ,ವಿರೇಂದ್ರ ಗೋಬರಿ ,
ಸಾಹಿತಿಗಳಾದ ಬಸವರಾಜ ಗಾರ್ಗಿ
ಸುಭಾಷ ಏಣಗಿ, ಡಾ.ಬಸವರಾಜ
ಏಣಗಿ ಹಾಗೂ ಬೆಂಗಳೂರಿನ
ವಿನಯಕುಮಾರ ಮುಂತಾದವರು
ಇಂದಿನ ನಿಯೋಗದಲ್ಲಿದ್ದರು.