ಬೆಂಗಳೂರು : ಉಕ್ರೇನ್ ಮೇಲೆ ಮಂಗಳವಾರ ರಷ್ಯಾ ಮಾಡಿದ ಶೆಲ್ ದಾಳಿಯಲ್ಲಿ ಕರ್ನಾಟಕದ ಹಾವೇರಿ ಜಿಲ್ಲೆಯ ವೈದ್ಯಕೀಯ ವಿದ್ಯಾರ್ಥಿಯೋರ್ವ ಅಸುನಿಗಿದ್ದು, ಇತರ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಉಕ್ರೇನ್‌ನ ಎರಡನೇ ಅತಿ ದೊಡ್ಡ ನಗರವಾದ ಖಾರ್ಕೀವ್‌ನಲ್ಲಿ ರಷ್ಯಾ ಸೇನೆ ನಡೆಸಿದ ಶೆಲ್ ದಾಳಿಯಲ್ಲಿ ಭಾರತ ಮೂಲದ ವಿದ್ಯಾರ್ಥಿ ಬೆಳಿಗ್ಗೆ ಮೃತಪಟ್ಟಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಟ್ವೀಟ್ ಮಾಡಿದೆ. ಮೃತರನ್ನು ಹಾವೇರಿ ಮೂಲದ ನವೀನ್ ಎಂದು ಗುರುತಿಸಲಾಗಿದೆ.
ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ ಶೇಖಪ್ಪ ಗ್ಯಾನಗೊಂಡರ್ ಮೃತ ದುರ್ದೈವಿ. ಅವರು ಎಂಬಿಬಿಎಸ್ ನಾಲ್ಕನೇ ವರುಷದ ವಿದ್ಯಾರ್ಥಿಯಾಗಿದ್ದರು. ಮೂಲಗಳ ಪ್ರಕಾರ ಬಂಕರ್ ಒಂದರಲ್ಲಿ ಆಶ್ರಯ ಪಡೆದಿದ್ದ ಅವರು ತಮ್ಮಿಂಬ್ಬರು ಸ್ನೇಹಿತರೊಂದಿಗೆ ಹೋಟೆಲ್ ನಿಂದ ತಿಂಡಿ ತರಲು ಹೊರಗೆ ಹೋಗಿದ್ದಾಗ ಶೆಲ್ ದಾಳಿಗೆ ಬಲಿಯಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೇರಿದಂತೆ ಅನೇಕ ಗಣ್ಯರು ನವೀನ್ ಸಾವಿಗೆ ಸಂತಾಪ ವ್ಯಕ್ತ ಪಡಿಸಿದ್ದಾರೆ.
ಮುಖ್ಯಮಂತ್ರಿ ಬೊಮ್ಮಾಯಿ ಕೂಡ ಹಾವೇರಿ ಜಿಲ್ಲೆಯವರೇ ಆಗಿದ್ದು ಮೃತ ನವೀನ್ ಕುಟುಂಬದ ಪರಿಚಯ ಹೊಂದಿದ್ದಾರೆ. ಇಂದು ನವೀನ್ ತಂದೆ ಶೇಖಪ್ಪ ಅವರೊಂದಿಗೆ ಮಾತನಾಡಿದ ಅವರು, ಶೇಖರಪ್ಪ “ತಮ್ಮ ಮಗ ನವೀನ್ ಪ್ರತಿದಿನ ಕೊನೆ ಪಕ್ಷ ಐದು ನಿಮಿಷವಾದರೂ ಮನೆಯವರೊಂದಿಗೆ ಮಾತನಾಡುತಿದ್ದರು,” ಎಂದು ತಿಳಿಸಿದ್ದಾಗಿ ಹೇಳಿದರು.
ನವೀನ್ ಮೃತದೇಹವನ್ನು ರಾಜ್ಯಕ್ಕೆ ತರಲು ಸರಕಾರ ಬಧವಾಗಿದ್ದು, 2-3 ದಿನಗಳಲ್ಲಿ ಶವ ರಾಜ್ಯಕ್ಕೆ ತರುವ ಯತ್ನ ನಡೆದಿದೆ ಎಂದರು.
ನವೀನ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೇ ಪೋಷಕರ ದು:ಖದ ಕಟ್ಟೆ ಒಡೆದಿದೆ. ನವೀನ್ ಸ್ನೇಹಿತರು ಮನೆಗೆ ತೆರಳಿ ಪೋಷಕರನ್ನು ಸಂತೈಸುತ್ತಿದ್ದಾರೆ.