ಸಮಾಜವಾದಿ ಪಾರ್ಟಿ ಹಾಗೂ ಇದರ ಮಿತ್ರ ಪಕ್ಷಗಳಿಗೆ ಅಸಾದುದ್ದೀನ್ ಓವೈಸಿಯವರ ಎಐಎಂಐಎಂ (ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್) ಪಕ್ಷ ಹಲವು ಕ್ಷೇತ್ರಗಳಲ್ಲಿ ಬಿಸಿ ತುಪ್ಪವಾಗಿರುವ ಸಾಧ್ಯತೆಯನ್ನು ಉತ್ತರ ಪ್ರದೇಶ ವಿಧಾನಸಭಾ ಚುನಾವಣಾ ಫಲಿತಾಂಶ ತೆರೆದಿಟ್ಟಿದೆ.
ಮತಗಳಿಕೆಯಲ್ಲಿ ಮೂರನೇ ಅತಿದೊಡ್ಡ ಪಕ್ಷವಾಗಿ ಹೊಮ್ಮಿರುವ ಬಹುಜನ ಸಮಾಜವಾದಿ ಪಕ್ಷವು ಹಲವೆಡೆ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಜೊತೆಗೆ ಹಲವಾರು ಪಕ್ಷೇತರ ಅಭ್ಯರ್ಥಿಗಳು ಮುಸ್ಲಿಮರಾಗಿದ್ದರು. ಇವೆಲ್ಲವೂ ಎಸ್‌ಪಿ ಮತ ಚದುರಲು ಕಾರಣವಾಗಿರಬಹುದು. ಅದಕ್ಕಾಗಿ ಹೆಚ್ಚಾಗಿ ಮುಸ್ಲಿಂ ಮುಖವಾಣಿ ಎಂದೇ ಬಿಂಬಿತವಾಗಿರುವ ಹೈದ್ರಾಬಾದ್ ಮೂಲದ ಎಎಂಐಎಂಎ ಪಕ್ಷಕ್ಕೆ ಬಿದ್ದಿರುವ ಮತಗಳು ಒಂದು ವೇಳೆ ಎಸ್‌ಪಿ ತೆಕ್ಕೆಗೆ ಬಿದ್ದಿದ್ದರೆ ಮತ್ತಷ್ಟು ಕ್ಷೇತ್ರಗಳು ಎಸ್‌ಪಿ ಪಾಲಾಗುತ್ತಿದ್ದವು ಎಂಬ ಚರ್ಚೆಯಾಗುತ್ತಿದೆ.
ಯಾದವ ಹಾಗೂ ಮುಸ್ಲಿಂ ಸಮುದಾಯದ ಮತಗಳನ್ನು ಬಹುಮುಖ್ಯವಾಗಿ ನಂಬಿಕೊಂಡಿರುವ ಸಮಾಜವಾದಿ ಪಕ್ಷವನ್ನು ಮುಸ್ಲಿಂ ಮತದಾರರು ಕೈ ಹಿಡಿದಿರುವುದು ಸ್ಪಷ್ಟವಾಗುತ್ತದೆ. ಬಿಜೆಪಿ ವಿರುದ್ಧ ಕಡಿಮೆ ಅಂತರದಲ್ಲಿ ಎಸ್‌ಪಿ ಸೋತಿರುವ ಕೆಲವು ಕ್ಷೇತ್ರಗಳಲ್ಲಿ ಎಐಎಂಐಎಂ ಸೇರಿದಂತೆ ಇತರ ಪಕ್ಷಗಳು ಮುಸ್ಲಿಂ ಮತಗಳನ್ನು ಚದುರಿಸಿರುವ ಸಾಧ್ಯತೆ ಇದೆ.
ಚದುರಿಸಿರುವ ಸಾಧ್ಯತೆ ಇದೆ.
ಒಟ್ಟು ಮತ ವಿಭಜನೆಯಲ್ಲಿ ಬಿಎಸ್‌ಪಿ ಶೇ. 12.88, ಬಿಜೆಪಿ ಶೇ. 41.29, ಎಸ್‌ಪಿ 32.06 ಮತಗಳನ್ನು ಪಡೆದಿವೆ. ಎಎಎಪಿ ಶೇ. 0.38, ಎಐಎಫ್‌ಬಿ ಶೇ. 0.00, ಸಿಪಿಐ ಶೇ. 0.07, ಸಿಪಿಐ(ಎಂ) ಶೇ. 0.01, ಸಿಪಿಐ(ಎಂಎಲ್) ಶೇ. 0.01, ಕಾಂಗ್ರೆಸ್ ಶೇ. 2.33, ಐಯುಎಂಎಲ್ ಶೇ. 0.00, ಜೆಡಿಯು ಶೇ 0.11, ಎಲ್‌ಜೆಪಿ ಶೇ. 0.00, ಎಲ್‌ಜೆಪಿಆರ್‌ವಿ ಶೇ. 0.01, ಎನ್‌ಸಿಪಿ ಶೇ. 0.05, ನೋಟಾ ಶೇ. 0.69%, ಆರ್‌ಎಲ್‌ಡಿ ಶೇ. 2.85, ಎಸ್‌ಎಚ್‌ಎಸ್ ಶೇ. 0.02, ಪಕ್ಷೇತರರು ಶೇ. 6.74 ಮತಗಳನ್ನು ಪಡೆದಿದ್ದಾರೆ. ಎಐಎಂಐಎಂ ಪಕ್ಷವು ಉತ್ತರ ಪ್ರದೇಶದ 100 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಶೇ. 0.49 ಮತಗಳನ್ನು ಎಐಎಂಐಎಂ ಪಡೆದಿರುವುದಾಗಿ ಚುನಾವಣಾ ಆಯೋಗ ಪ್ರಕಟಿಸಿದೆ. ಶೇ. 0.49ರಷ್ಟು ಮತ ಗಳಿಸಿದರೂ ಮತ ವಿಭಜನೆಯಾಗುವಲ್ಲಿ ಎಐಎಂಐಎಂ ಪ್ರಮುಖ ಪಾತ್ರ ವಹಿಸಿರುವುದು ಕಂಡು ಬರುತ್ತಿದೆ. ಈ ನಿಟ್ಟಿನಲ್ಲಿ ಕೆಲವು ಕ್ಷೇತ್ರಗಳ ಫಲಿತಾಂಶ ಚರ್ಚೆಯಾಗುತ್ತಿದೆ.
ಹಲವು ಕ್ಷೇತ್ರಗಳಲ್ಲಿ ಎಸ್‌ಪಿ ಮತಗಳು ವಿಭಜನೆಯಾಗಿರುವ ಸಾಧ್ಯತೆಯನ್ನು ಚುನಾವಣಾ ಫಲಿತಾಂಶ ತೆರೆದಿಟ್ಟಿದೆ. ಉತ್ತರ ಪ್ರದೇಶದ ಚುಣಾವಣೆಯಲ್ಲಿ ಓವೈಸಿಯವರ ಉಪಸ್ಥಿತಿ, ಮುಸ್ಲಿಂ ಮತಬ್ಯಾಂಕ್ ಮೂಲಕ ಗುರುತಿಸಿಕೊಂಡಿರುವ ಎಸ್‌ಪಿಗೆ ಹೊಡೆತ ನೀಡಿದೆ ಎಂದೇ ಚರ್ಚೆಗಳಾಗುತ್ತಿವೆ. ಚುನಾವಣಾ ರಾಜಕಾರಣದಲ್ಲಿ ಜಾತಿಗಳ ಸಮೀಕರಣ, ಕೋಮು ಧ್ರುವೀಕರಣ ಹಾಗೂ ಸಂಪತ್ತಿನ ಕ್ರೋಢೀಕರಣ ಕೆಲಸ ಮಾಡುತ್ತದೆ ಎಂಬುದು ಓಪನ್ ಸಿಕ್ರೆಟ್. ಮಾಯವತಿಯವರ ಮೌನವೂ ಬಿಜೆಪಿಯ ದಿಗ್ವಿಜಯಕ್ಕೆ ಕಾರಣವಾಗಿರಬಹುದೆಂಬ ಸಾಧ್ಯತೆಯನ್ನು ಹೊರಗಿಟ್ಟು ನೋಡಲಾಗದು.