No menu items!
Thursday, December 26, 2024

ಸೋಮವಾರದಿಂದ 9, 10ನೇ ತರಗತಿ ಪುನಾರಂಭ, ಕಾಲೇಜು ರಜೆ ಫೆಬ್ರವರಿ 16ವರೆಗೆ ವಿಸ್ತರಣೆ

Must read

ಬೆಂಗಳೂರು : ಸೋಮವಾರದಿಂದ 9, 10ನೇ ತರಗತಿಗಳು ಮತ್ತೆ ಆರಂಭವಾಗಲಿದ್ದು, ಪದವಿ ಹಾಗೂ ಪದವೀಪೂರ್ವ ತರಗತಿಗಳ ರಜೆಯನ್ನು ಫೆಬ್ರವರಿ 16ರವರೆಗೆ ವಿಸ್ತರಿಸಲಾಗಿದೆ.

ಹಿಜಾಬ್ ವಿವಾದಕ್ಕೆ ಸಂಬಂಧಿಸಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಉಂಟಾಗಿರುವ ವಿಕೋಪ ಪರಿಸ್ಥಿತಿ ನಿಗ್ರಹಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು.
ಮುಖ್ಯಮಂತ್ರಿಗಳ ಗೃಹಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ವಹಿಸಲು ಸೂಚನೆ ನೀಡಿದ್ದಾರೆ. “ಸೋಮವಾರ ಹೈಸ್ಕೂಲ್ ಬಳಿ ಕಟ್ಟೆಚ್ಚರ ವಹಿಸಿ. ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ, ಸಂಘಟನೆಗಳ ಮೇಲೆ‌ ನಿಗಾ ಇಡಿ. ಇಲಾಖೆಗಳ‌ ನಡುವೆ ಸಮನ್ವಯತೆ ಇರಲಿ,”ಎಂದು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಸೂಚನೆ ನೀಡಿದ್ದಾರೆ.

ಹಿಜಾಬ್, ಕೇಸರಿ ಶಾಲು ವಿಚಾರದಲ್ಲಿ ಗಲಾಟೆಯಾಗಿದ್ದ ಜಿಲ್ಲೆಗಳಲ್ಲಿ ಶಾಲೆಗಳಿಗೆ ಹೆಚ್ಚುವರಿ ಭದ್ರತೆ ನೀಡಿ ಎಂದು ಹೇಳಿದ್ದಾರೆ.

ಜಿಲ್ಲಾಧಿಕಾರಿಗಳು, ಎಸ್​ಪಿಗಳು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಶಾಲೆಗಳ ಸುತ್ತಮುತ್ತ ಸಹ ಪೊಲೀಸ್ ಭದ್ರತೆ ನೀಡಬೇಕು ಎಂದು ಸೂಚನೆ ಕೊಡಲಾಗಿದೆ. ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು. ಆ ಬಗ್ಗೆ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡುವಂತೆಯೂ ಡಿಸಿ, ಎಸ್​ಪಿ, ಸಿಇಒ, ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ, ” ಎಂದು ಡಿಸಿಗಳ ಜತೆ ವಿಡಿಯೋ ಕಾನ್ಫರೆನ್ಸ್ ಬಳಿಕ ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳ ಮೇಲೆ ನಿಗಾವಹಿಸಬೇಕು, ಕೆಲವು ಮಕ್ಕಳು, ಪೋಷಕರು ಸಂಘಟನೆಗಳ ಜೊತೆ ಸಂಪರ್ಕ ಹೊಂದಿದ್ದಾರೆ. ಮತೀಯ ಸಂಘಟನೆಗಳ ಜತೆ ಸಂಪರ್ಕದಲ್ಲಿರುವ ಬಗ್ಗೆ ಮಾಹಿತಿ ಲಭ್ಯವಿದೆ. ಈ ಬಗ್ಗೆ ತನಿಖೆ ನಡೆಸಿ ಕ್ರಮಕೈಗೊಳ್ಳಲಾಗುವುದು ಎಂದು ಗೃಹಸಚಿವರು ತಿಳಿಸಿದ್ದಾರೆ.

ಹೈಕೋರ್ಟ್ ಆದೇಶ ಪಾಲಿಸಬೇಕು, ಸ್ಥಳೀಯ ಆಡಳಿತದ ಒತ್ತಡಕ್ಕೆ ಮಣಿಯಬಾರದು,
ಆದ್ಯತೆ ಮೇರೆಗೆ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಸೂಚನೆ ಕೊಡಲಾಗಿದೆ.

ಹೊರಗಿನ ಪ್ರಚೋದನೆಗೆ ಒಳಗಾಗದಂತೆ ಕ್ರಮಕೈಗೊಳ್ಳುವುದು. ಧಾರ್ಮಿಕ ಮುಖಂಡರ ಜೊತೆ ಸೇರಿ ಶಾಂತಿ ಸಭೆ ನಡೆಸುವುದು. ಸಮಾಜಘಾತುಕ ಶಕ್ತಿಗಳನ್ನು ನಿಯಂತ್ರಿಸುವಂತೆ ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ಕಾಲೇಜುಗಳ ಆರಂಭಕ್ಕೆ ಒತ್ತು ನೀಡುತ್ತೇವೆ. ಪರಿಸ್ಥಿತಿ ಗಮನಿಸಿ ಒಂದೆರಡು ದಿನಗಳಲ್ಲಿ ನಿರ್ಧಾರ ತಿಳಿಸುತ್ತೇವೆ ಎಂದು ಸಭೆ ನಂತರ ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article

error: Content is protected !!