ಬೆಳಗಾವಿ: ಪಿತ್ರಾರ್ಜಿತ ಆಸ್ತಿ ಪರಭಾರೆಗೆ ಸಂಬಂಧಪಟ್ಟ ದಾಖಲಾತಿಗಳನ್ನು ನೀಡಲು 4,000 ರೂ.ಗಳನ್ನು ಲಂಚ ಕೇಳಿದ ಸವದತ್ತಿ ತಾಲೂಕು ಮುರಗೋಡದ ಸಬ್ ರಿಜಿಸ್ಟ್ರಾರ್ ಮತ್ತು ಅವರ ಪರವಾಗಿ ಲಂಚವನ್ನು ಸ್ವೀಕರಿಸಿದ್ದ ಬಾಂಡ್ ರೈಟರ್ ಬುಧವಾರ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಬಲೆಗೆ ಬಿದ್ದಿದ್ದಾರೆ.
ಸಬ್ ರಿಜಿಸ್ಟ್ರಾರ್ ಸಂಜೀವ ವೀರಭದ್ರ ಕಪಾಲಿ ಹಾಗೂ ಸ್ಥಳೀಯ ಬಾಂಡ್ ರೈಟರ್ ಶಿವಯೋಗಿ ಶಂಕರಯ್ಯ ಮಲ್ಲಯ್ಯನವರ ಇಬ್ಬರನ್ನೂ ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಸಂಜೀವ ಕಪಾಲಿ ದಾಖಲೆ ಪತ್ರಗಳನ್ನು ನೀಡಲು ವಿನಾಕಾರಣ ವಿಳಂಬ ಧೋರಣೆ ತೋರುವುದಲ್ಲದೆ, ಕೇಳಿದಾಗ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಶಿವಪ್ಪ ವರಗಣ್ಣವರ ಎಂಬವರು ಎಸಿಬಿಗೆ ದೂರು ನೀಡಿದ್ದರು.
ದೂರಿನ ಆಧಾರದಲ್ಲಿ ದಾಳಿ ನಡೆಸಿದ ಅಧಿಕಾರಿಗಳು, ಲಂಚ ಪಡೆಯುವ ಸಂದರ್ಭದಲ್ಲಿ ರೆಡ್ ಹ್ಯಾಂಡ್ ಆಗಿ ಆರೋಪಿಗಳನ್ನು ಹಿಡಿದು ಬಂಧಿಸಿದ್ದಾರೆ.
ಎಸಿಬಿ (ಉತ್ತರ ವಲಯ) ಎಸ್ಪಿ ಬಿ.ಎಸ್.ನೇಮಗೌಡ ಮಾರ್ಗದರ್ಶನದಲ್ಲಿ ಹಾಗೂ ಡಿವೈಎಸ್ಪಿ ಕರುಣಾಕರಶೆಟ್ಟಿ ಮತ್ತು ಇನಸ್ಪೆಕ್ಟರ್ ಎ.ಎಸ್.ಗುದಿಗೊಪ್ಪ ಇವರ ನೇತೃತ್ವದಲ್ಲಿ ದಾಳಿಯನ್ನು ನಡೆಸಲಾಯಿತು.