ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಪಟ್ಟಣದ ನಿರ್ಮಲ ಹೃದಯ ಆಂಗ್ಲ ಮಾಧ್ಯಮ ಶಾಲೆಯ 4 ತರಗತಿ ಕೊಠಡಿಯ ಮೇಲ್ಛಾವಣಿಯ ತಳಬಾಗದ ಕಾಂಕ್ರೀಟ್ ಪದರು ಕುಸಿದು ಬಿದ್ದು ನಾಲ್ಕು ವಿದ್ಯಾರ್ಥಿಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ.
ಗಾಯಗೊಂಡ ವಿದ್ಯಾರ್ಥಿಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಧ್ಯಾಹ್ನ 12:30ಕ್ಕೆ ಈ ದುರಂತ ಸಂಭವಿಸಿದೆ. ಅದೃಷ್ವವಶಾತ್ ಆಗ ಊಟದ ವಿರಾಮ ಇದ್ದದರಿಂದ ಬಹಳಷ್ಟು ವಿದ್ಯಾರ್ಥಿ ತರಗತಿಯ ಹೊರಗೆ ಊಟಕ್ಕೆ ಹೋಗಿದ್ದು ಕೆಲವೇ ವಿದ್ಯಾರ್ಥಿಗಳು ತರಗತಿಯೊಳಗೆ
ಊಟ ಮಾಡುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಮೇಲ್ಛಾವಣಿಯ ತಳಬಾಗದ ಕಾಂಕ್ರೀಟ್ ಪದರು ಕುಸಿದು ಕೆಳಗೆ ಬಿದ್ದು ವಿದ್ಯಾರ್ಥಿಗಳು ಕುಳಿತುಕೊಳ್ಳುವ ಡೆಸ್ಕ್ ಸೇರಿದಂತೆ ತರಗತಿ ಒಳಗಡೆ ಬಿದ್ದಿದೆ.
ಗಾಯಗೊಂಡ ಮಕ್ಕಳನ್ನು ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರ ಜಿಲ್ಲಾಸ್ಪತ್ರೆಗೆ ಕರೆತರಲಾಗಿದೆ.
ತರಗತಿಯಲ್ಲಿ 66 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಬಹುಪಾಲು ವಿದ್ಯಾರ್ಥಿಗಳು ತರಗತಿಯ ಹೊರಗೆ ಇದ್ದ ಕಾರಣ ಹೆಚ್ಚಿನ ಅನಾಹುತ ತಪ್ಪಿದೆ.
ಪೋಲಿಸರು, ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಕ್ಷ್ಮೀ ಪಾಟೀಲ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಕೂಡ ಆಸ್ಪತ್ರೆಗೆ ತೆರಳಿ ಮಕ್ಕಳ ಆರೋಗ್ಯ ವಿಚಾರಿಸಿದರು. ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.