ಕೊಟ್ಟಾಯಂ : ಕೇರಳದಲ್ಲಿ ಹಾವು ಹಿಡಿಯುವವರಲ್ಲಿ ಹೆಸರುವಾಸಿಯಾದ “ವಾವಾ ಸುರೇಶ್” ಅವರು ಹಾವೊಂದನ್ನು ಹಿಡಿಯುವಾಗ ಅದು ಕಚ್ಚಿದ್ದು ಅವರೀಗ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೊಯ್ದಡುತ್ತಿದ್ದಾರೆ.
ಮನೆಯಲ್ಲಿ ಹಾವು ಸೇರಿಕೊಂಡಿರುವ ಕುರಿತು ಮಾಹಿತಿ ಪಡೆದ ಸುರೇಶ್, ಹಾವನ್ನು ಹಿಡಿಯಲು ಸ್ಥಳಕ್ಕೆ ತೆರಳುತ್ತಾರೆ. ಆದರೆ ಅದು ವಿಷಪೂರಿತ ನಾಗರಹಾವು ಎಂದು ಅವರಿಗೆ ಕಚ್ಚಿದ ಮೇಲೆ ಗೊತ್ತಾಗಿದೆ. ಗಂಭೀರ ಸ್ಥಿತಿಯಲ್ಲಿರುವ ಅವರನ್ನು ಕೊಟ್ಟಾಯಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸಾವಿರಾರು ವಿಷ ಸರ್ಪಗಳನ್ನು ಹಿಡಿದು ಜನರಿಗೆ ನೆಮ್ಮದಿ ನಿಡ್ಡಿದ ಸುರೇಶ್ ಸಾವು ಬದುಕಿನ ನಡುವೆ ಹೋರಾಡುತ್ತಿದ್ದು ಅವರ ಚೇತರಿಕೆಗಾಗಿ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
ವಾವಾ ಸುರೇಶ್ ಈಗ ವೆಂಟಿಲೇಟರ್ ಬೆಂಬಲದಲ್ಲಿದ್ದು, ಸ್ಥಿತಿ ಚಿಂತಾಜನಕವಾಗಿದೆ ಆದರೆ ವಿಶೇಷ ಆರೈಕೆಗಳ ಬಳಿಕ ಆರೋಗ್ಯ ಸ್ವಲ್ಪ ಸುಧಾರಿಸಿದೆ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ.
ಕೊಟ್ಟಾಯಂನ ಕುರಿಚಿ ಗ್ರಾಮದ ಮನೆಗೆ ಹಾವು ಹಿಡಿಯಲು ಹೋದಾಗ ಹಾವು ಕಚ್ಚಿದೆ.
ಸುರೇಶ ಹಾವನ್ನು ಹಿಡಿಯುವುದನ್ನು ವೀಕ್ಷಿಸಲು ಅಪಾರ ಜನಸ್ತೋಮವೇ ನೆರೆದಿತ್ತು, ಒಂದು ಕೈಯಲ್ಲಿ ಬಾಲ ಹಿಡಿದುಕೊಂಡು ಗೋಣಿ ಚೀಲಕ್ಕೆ ಹಾಕಲು ಯತ್ನಿಸುತ್ತಿದ್ದಾಗ ಸರ್ಪ ಬಲತೊಡೆಗೆ ಕಚ್ಚಿದೆ. ಕಚ್ಚಿದ ಬಳಿಕವೂ ತಪ್ಪಿಸಿಕೊಂಡ ನಾಗರಹಾವನ್ನು ಹಿಡಿದು, ಅದನ್ನು ಪ್ಯಾಕ್ ಮಾಡಿ, ತುರ್ತು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯುವಂತೆ ಕೇಳಿದರು.