ಮೈಸೂರು:
ವಿಧಾನ ಪರಿಷತ್ ವಿರೋಧಿ ಪಕ್ಷದ ಅಧ್ಯಕ್ಷ ಸ್ಥಾನ ತಪ್ಪಿಹೋಗಿದ್ದಕ್ಕೆ ಹತಾಶರಾಗಿರುವ ಸಿಎಂ ಇಬ್ರಾಹಿಂ ಪ್ರೇಮಿಗಳ ದಿನವಾದ ಫೆಬ್ರವರಿ 14ರಂದು ತಮ್ಮ ಪರಿಷತ್ ಸ್ಥಾನಕ್ಕೆ, ಕಾಂಗ್ರೆಸ್ ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೇನಾಮೆ ನೀಡುವದಾಗಿ ಸಾರಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ನಾನು ಹೊಸ ಪಕ್ಷ ಕಟ್ಟುವುದಿಲ್ಲ. ಜನಾಭಿಪ್ರಾಯ ಸಂಗ್ರಹಿಸಿ ಯಾವ ಪಕ್ಷಕ್ಕೆ ಸೇರ್ಪಡೆಯಾಗಬೇಕು ಎಂದು ನಿರ್ಧರಿಸುತ್ತೇನೆ.
ಫೆಬ್ರವರಿ 14 ರಂದು ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಅಂದೇ ಮುಂದಿನ ರಾಜಕೀಯ ನಿರ್ಧಾರ ಪ್ರಕಟಿಸುತ್ತೇನೆ ಎಂದು ಇಬ್ರಾಹಿಂ ಹೇಳಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್‌ನ ಅಧ್ಯಾಯ ಮುಗಿದು ಹೋಗಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಕನಸಿನ ಮಾತು ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲಿ ಅಸಹಾಯಕರಾಗುತ್ತಿದ್ದಾರೆ. ತಾವಂತೂ ಹೋರಾಟ ಪ್ರಾರಂಭಿಸಿದ್ದು ಫೆಬ್ರವರಿ 14 ಲವರ್ಸ್ ಡೇ, ಅಂದೇ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ, ಮುಂದೆ ಯಾವ ಪಕ್ಷ ಸೇರ್ಪಡೆಯಾಗುವುದು ಎಂದು ಹೇಳುತ್ತೇನೆ ಎಂದು ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನನ್ನದೇ ಸ್ಥಿತಿ ಬರುತ್ತದೆ. ನನ್ನ ಜೊತೆ ಸಿದ್ದರಾಮಯ್ಯ ಮಾತಾಡಿಲ್ಲ. ಅವರನ್ನ ಬಾದಾಮಿಗೆ ಹೊತ್ತುಕೊಂಡು ಹೋದವನು ನಾನು. ಎಲ್ಲದಕ್ಕೂ ಕಾಲವೇ ಉತ್ತರ ನೀಡುತ್ತದೆ ಎಂದು ಹೇಳಿದ್ದಾರೆ.