ಬೆಂಗಳೂರು: ಉಡುಪಿಯ ಹಿಜಾಬ್ ಧರಿಸುವುದನ್ನು ನಿರ್ಬಂಧಿಸಿರುವ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನ ಕ್ರಮ ಪ್ರಶ್ನಿಸಿ ವಿದ್ಯಾರ್ಥಿನಿ ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್ ಫೆಬ್ರವರಿ 8ಕ್ಕೆ ನಡೆಸಲಿದೆ.
ವಿದ್ಯಾರ್ಥಿನಿ ರೇಷ್ಮಾ ಫಾರೂಕ್, ಇತರೆ ವಿದ್ಯಾರ್ಥಿನಿ ಸಲ್ಲಿಸಿರುವ ಅರ್ಜಿಯನ್ನು ಇಂದು, ಗುರುವಾರ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ವಿದ್ಯಾರ್ಥಿಗಳ ಪರ ವಕೀಲರು ವಾದಿಸಿ, ವಿದ್ಯಾರ್ಥಿನಿಯರನ್ನು ತರಗತಿಗೆ ಪ್ರವೇಶ ನೀಡುತ್ತಿಲ್ಲ. ಇದರಿಂದ ಅವರ ಕಲಿಕೆಗೆ ಸಮಸ್ಯೆಯಾಗಿದೆ ಎಂದು ತಿಳಿಸಿದರು. ವಿಚಾರಣೆಯಲ್ಲಿ ಸರ್ಕಾರದ ಪರ ವಕೀಲರು ಹಾಜರಾಗಿ, ಅಡ್ವೋಕೇಟ್ ಜನರಲ್ ವಾದ ಮಂಡಿಸಲಿದ್ದಾರೆ. ಅದಕ್ಕಾಗಿ ಸ್ವಲ್ಪ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು. ಅರ್ಜಿ ಸಂಬಂಧ ವಿವರಣೆ ನೀಡಲು ರಾಜ್ಯ ಸರ್ಕಾರಕ್ಕೆ ಸೂಚಿಸಿ ವಿಚಾರಣೆಯನ್ನು ಫೆಬ್ರವರಿ 8ಕ್ಕೆ ಮುಂದೂಡಿತು.
ಸಂಪೂರ್ಣ ವಿಷಯ ಇತ್ಯರ್ಥವಾಗುವ ಮೊದಲು ಹಿಜಾಬ್ ಧರಿಸಿ ತರಗತಿಗಳಿಗೆ ಹಾಜರಾಗಲು ಮಧ್ಯಂತರ ಪರಿಹಾರವನ್ನು ಕೋರಿ ವಿದ್ಯಾರ್ಥಿನಿ ಜನವರಿ 31 ರಂದು, ಹೈಕೋರ್ಟ್ ಮೊರೆ ಹೋಗಿದ್ದಳು.
ಹಿಜಾಬ್ ಧರಿಸುವುದು ಸಂವಿಧಾನದ 14 ಮತ್ತು 25 ನೇ ವಿಧಿಯ ಅಡಿಯಲ್ಲಿ ತನ್ನ ಮೂಲಭೂತ ಹಕ್ಕು ಎಂದು ವಿದ್ಯಾರ್ಥಿನಿಯು ತನ್ನ ಅರ್ಜಿಯಲ್ಲಿ ತಿಳಿಸಿದ್ದಾಳೆ.
2016 ರ ಪ್ರಕರಣದಲ್ಲಿ, ಕೇರಳ ಹೈಕೋರ್ಟ್ ಹಿಜಾಬ್ ಧರಿಸುವುದು ಇಸ್ಲಾಮಿಕ್ ಅಭ್ಯಾಸ ಎಂದು ಹೇಳಿದೆ. ಸಂವಿಧಾನದ 14 ನೇ ವಿಧಿಯು ಕಾನೂನಿನ ಮುಂದೆ ಸಮಾನತೆಯ ಹಕ್ಕನ್ನು ಖಾತರಿಪಡಿಸುತ್ತದೆ ಮತ್ತು 25 ನೇ ವಿಧಿಯು ಭಾರತದಲ್ಲಿನ ಎಲ್ಲಾ ವ್ಯಕ್ತಿಗಳಿಗೆ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡುತ್ತದೆ. ತರಗತಿಗಳಿಗೆ ಹಾಜರಾಗಲು ಅವಕಾಶ ನೀಡದಿರುವುದು ಸಾಂವಿಧಾನಿಕ ನೈತಿಕತೆಗೆ ವಿರುದ್ಧವಾಗಿದೆ ಏಕೆಂದರೆ ಅದು ಸಾರ್ವಜನಿಕ ಹಿತಾಸಕ್ತಿಗಳನ್ನು ಪೂರೈಸುವುದಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.