ಕುಂದಾಪುರ: ತಾಲೂಕಿನ ಬೇರೆ ಬೇರೆ ಕಾಲೇಜಿನಲ್ಲಿ ಹಿಜಾಬ್ ವಿವಾದ ಬೆನ್ನಲ್ಲೇ ಗುರುವಾರ ಬೆಳಗ್ಗೆ ಬಿದ್ಕಲ್ ಕಟ್ಟೆ ಬಳಿ ಬಸ್ಸಿನಲ್ಲಿ ಐಟಿಐ ವಿದ್ಯಾರ್ಥಿಯ ಮೇಲೆ ಮೂವರು ದುಷ್ಕರ್ಮಿಗಳು ನಡೆಸಿದ ಹಲ್ಲೆ ಪ್ರಕರಣ ಉದ್ವಿಗ್ನತೆ ಕಾರಣವಾಗಿದೆ.
ಬಸ್ಸಿನಲ್ಲಿ ಪಯಣಿಸುತ್ತಿದ್ದ ಒಂದು ಕೋಮಿನ ವಿದ್ಯಾರ್ಥಿನಿಯೊಂದಿಗೆ ಬೇರೊಂದು ಕೋಮಿನ ಯುವಕ ಮಾತನಾಡಿದ ಎಂಬ ಕಾರಣಕ್ಕೆ ಮೂವರು ಯುವಕರು ಐಟಿಐ ವಿದ್ಯಾರ್ಥಿ ಶಶಾಂಕ್ ಎಂಬವರ ಮೇಲೆ ಹಲ್ಲೆ ಮಾಡಿದ್ದಾರೆ. ಗಾಯಗೊಂಡಿರುವ ಶಶಾಂಕ್ ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹೈಕಾಡಿಯಿಂದ ಬಸ್‌ನಲ್ಲಿ ಐಟಿಐ ಕಾಲೇಜಿಗೆ ಗೆಳೆಯ ರವಿ ಅವರೊಂದಿಗೆ ವಿದ್ಯಾರ್ಥಿ ಶಶಾಂಕ್ ಬರುತ್ತಿದ್ದ ವೇಳೆ, ಬಿದ್ಕಲ್ ಕಟ್ಟೆಯ ಸಮೀಪ ಪರಿಚಯದ ವಿದ್ಯಾರ್ಥಿನಿಯೊಂದಿಗೆ ಮಾತನಾಡುತ್ತಿದ್ದರು. ಈ ವೇಳೆ, ಮೂವರು ದುಷ್ಕರ್ಮಿಗಳು ಏಕಾಏಕಿ ದಾಳಿ ನಡೆಸಿ “ಅವಳೊಂದಿಗೆ ನೀನು ಯಾಕೆ ಮಾತನಾಡುತ್ತೀಯಾ,” ಎಂದು ಪ್ರಶ್ನಿಸಿ ಹಲ್ಲೆ ನಡೆಸಿದ್ದಾರೆ. ಹಲ್ಲೆ ತಡೆಯಲು ಯತ್ನಿಸಿದ ಶಶಾಂಕ್‌ನ ಸಹಪಾಠಿ ಪ್ರಜ್ವಲ್‌ಗೂ ಸಹ ಏಟು ಬಿದ್ದಿದೆ.
ಹಲ್ಲೆಗೈದವರು ಶಾಸ್ತ್ರೀ ವೃತ್ತದ ಸಮೀಪ ಒಂದು ಪ್ರಾರ್ಥನಾ ಕೇಂದ್ರದೊಳಗೆ ನುಗ್ಗಿದ್ದಾರೆ ಎಂದು ಕೆಲವರು ಆರೋಪಿಸಿದ ಪರಿಣಾಮ ಕೆಲಕಾಲ ಉದ್ವಿಗ್ನತೆ ಸೃಷ್ಟಿಯಾಗಿತ್ತು. ಸರ್ಕಲ್ ಇನ್ಸ್‌ಪೆಕ್ಟರ್ ಗೋಪಿಕೃಷ್ಣ, ಪಿಎಸ್‌ಐ ಸದಾಶಿವ ಗವರೋಜಿ, ಪಿಎಸ್‌ಐ ಸುಧಾ ಪ್ರಭು ಸ್ಥಳಕ್ಕಾಗಮಿಸಿ ಗುಂಪನ್ನು ಚದುರಿಸಿದರು. ಪ್ರಾರ್ಥನಾ ಮಂದಿರಕ್ಕೆ ತೆರಳಿ ಶೋಧ ನಡೆಸಿದ್ದು ಆರೋಪಿಗಳ ಪತ್ತೆಯಾಗಿಲ್ಲ. ಹಲ್ಲೆ ನಡೆಸಿದವರು ಗುರುತು ವಿಳಾಸ ಪತ್ತೆ ಹಚ್ಚಿರುವ ಪೊಲೀಸರು, ಬಂಧನಕ್ಕಾಗಿ ಬಲೆ ಬೀಸಿದ್ದಾರೆ.