ಬೆಳಗಾವಿ : “ನಾವು ಬೀದಿ ನಾಯಿಗಳಿಗೆ ಆಹಾರವಿಟ್ಟು ಆರೈಕೆ ಮಾಡಿದರೆ ಎದುರು ಮನೆಯವರು ಅವಕ್ಕೆ ಬಿಸಿನೀರು ಹಾಕಿ ತೊಂದರೆ ನೀಡುತ್ತಿದ್ದಾರೆ. ಈ ಕುರಿತು ಪೊಲೀಸರಗೆ ದೂರು ನೀಡಿದರೆ ನಮ್ಮ ಮೇಲೆಯೇ ಪೊಲೀಸರು ದಬಾಯಿಸುತ್ತಾರೆ,” ಎಂದು ಅನಿತಾ ಶಂಕರ್ ದೊಡಮನಿ ನಗರಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಅನಿತಾ ಶಂಕರ್ ದೊಡಮನಿ ಬೆಳಗಾವಿ ಖಾಸಬಾಗ್‍ದ ಮಾರುತಿಗಲ್ಲಿಯ ವಾರ್ಡ್ ನಂ 21ರ ನಿವಾಸಿ. ಇವರು ರಸ್ತೆಯಲ್ಲಿ ಅಲೆದಾಡುವ ಬೀದಿ ನಾಯಿಗಳಿಗೆ ಅಲ್ಲಿ ಇಲ್ಲಿ ಅಲೆದು ಆಹಾರ ತಂದು ಸುಮಾರು 8 ನಾಯಿಗಳನ್ನು ಸಾಕಿದ್ದಾರೆ. ಅನ್ನವನ್ನು ಆಶ್ರಯಿಸಿ ಆ ನಾಯಿಗಳು ಅಲ್ಲಿಯೇ ಅವರ ಮನೆಯ ಪಕ್ಕದಲ್ಲಿಯೇ ವಾಸ್ತವ್ಯ ಹೂಡಿವೆ. ಆದರೆ ಎದುರು ಮನೆಯ ವಿಜಯ ಮತ್ತು ವನಿತಾ ಭಸ್ಮೆ ಎಂಬ ದಂಪತಿ ಮಲಗಿರುವ ನಾಯಿಗಳ ಮೇಲೆ ಬಿಸಿನೀರನ್ನು ಎರಚಿ ಅವಕ್ಕೆ ತೊಂದರೆ ಕೊಡುತ್ತಿದ್ದಾರೆ. ಈ ಕುರಿತು ಕೇಳಿದರೆ, ನಾಯಿಗಳು ಬೀದಿಯಲ್ಲಿ ಹೊಲಸು ಮಾಡುತ್ತವೆ, ಜನರಿಗೆ ತೊಂದರೆ ಕೊಡುತ್ತವೆ, ಅವುಗಳ ದೆಸೆಯಿಂದ ಪರಿಚಿತರು ಮನೆಗೆ ಬರುವುದು ಕಡಿಮೆಯಾಗಿದೆ ಎನ್ನುತ್ತಾರೆ.
ಮನೆಯ ಮುಂದೆ ಹಾಕಿದ ರಂಗೋಲಿಯನ್ನು ಹಾಳು ಮಾಡುತ್ತವೆ ಎಂಬ ಕಾರಣಗಳನ್ನು ಹೇಳಿ ನಮ್ಮೊಂದಿಗೆ ಜಗಳವಾಡುತ್ತಾರೆ. ಈ ಕುರಿತು ಶಹಾಪೂರ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ವಿನಾಯಕ್ ಬಡಿಗೇರ ಅವರಿಗೆ ದೂರು ನೀಡಲು ಹೋದರೆ ಹೆಣ್ಣು ಮಕ್ಕಳೂ ಎನ್ನದೇ ದಬಾಯಿಸಿ ಕಳಿಸಿದ್ದಾರೆ. ಅಲದೇ ಏಕವಚನದಲ್ಲಿಯೇ ಮಾತನಾಡಿದ್ದಾರೆ. ಹಾಗಾಗಿ ಈ ಕುರಿತಂತೆ ಸಿಪಿಐ ವಿನಾಯಕ ಬಡಿಗೇರ್ ಮೇಲೆ ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್ ಆಯುಕ್ತರಾದ ಡಾ.ಬೋರಲಿಂಗಯ್ಯ ರವರಿಗೆ ಮನವಿ ಮಾಡಿದ್ದಾರೆ.
ಇನ್ನು ತಮಗೆ ನ್ಯಾಯ ಕೊಡಿಸಿ ಇನ್ಸ್ಪೆಕ್ಟರ್ ವಿನಾಯಕ ಬಡಿಗೇರ್ ಮೇಲೆ ಕ್ರಮ ಕೈಗೊಳ್ಳುವಂತೆ ಕಮಿಷನರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.