ಬೆಳಗಾವಿ : “ತಮ್ಮ ಬೋಡಕೆನಟ್ಟಿ ಗ್ರಾಮ ಪಂಚಾಯತಿಯಲ್ಲಿ ಭ್ರಷ್ಟಾಚಾರ ನಡೆದಿದೆ, ಸಂಬಂದಿಸಿದವರ ಕುರಿತು ಕ್ರಮ ತೆಗೆದುಕೊಳ್ಳಿ” ಎಂದು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದ ವ್ಯಕ್ತಿಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ, ಮಾಜಿ ಸದಸ್ಯರು ಮತ್ತು ಬೆಂಬಲಿಗರು ಥಳಿಸಿರುವ ಘಟನೆ ಬೆಳಗಾವಿ ತಾಲೂಕಿನ ಬೋಡಕೇನಟ್ಟಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಶೆಟ್ಟು ಕಾಳಪ್ಪ ನಾಯಕ್ ಎಂಬವರು ನಿನ್ನೆ ಸೋಮವಾರ, ತಮ್ಮ ಗ್ರಾಮ ಪಂಚಾಯತಿಯಲ್ಲಿ ನಡೆದಿರುವ ಆರ್ಥಿಕ ಅವ್ಯವಹಾರ, ಭ್ರಷ್ಟಾಚಾರದ ಕುರಿತು ದೀರ್ಘವಾದ ಮನವಿಯೊಂದನ್ನು ಬೆಳಗಾವಿಯ ಜಿಲ್ಲಾಧಿಕಾರಿಗಳಿಗೆ ಅರ್ಪಿಸಿದ್ದರು.
ಇದರಿಂದ ಕುಪಿತಗೊಂಡ ಗ್ರಾಮ ಪಂಚಾಯತ್ ಅಧ್ಯಕ್ಷ, ಮಾಜಿ ಸದಸ್ಯರು ನಾಯಕ್ ಅವರನ್ನು ಥಳಿಸಿದಲ್ಲದೇ ಅವರ ಮನೆಯ ಮೇಲೆ ಕಲ್ಲುಗಳನ್ನೂ ಎಸೆದಿದ್ದಾರೆ.
ಶೆಟ್ಟು ನಾಯಕ್ ಡಿಸಿಗೆ ಸಲ್ಲಿಸಿರುವ ಮನವಿಯಲ್ಲಿ – ನೆರೆ ಸಂತ್ರಸ್ತರಿಗೆ ನೀಡಬೇಕಾದ ವಸತಿ ಯೋಜನೆಗಳ ಮನೆಗಳ ಹಂಚಿಕೆಯಲ್ಲಿ ಗೋಲ್‍ಮಾಲ್ ನಡೆದಿದ್ದು, ಮನೆ ಇದ್ದವರಿಗೂ ಮನೆಗಳನ್ನು ಹಂಚಿಕೆ ಮಾಡಿದ್ದಾರೆ. ಮನೆ ಕಳೆದುಕೊಂಡವರಿಗೆ ಮನೆ ಮಂಜೂರು ಮಾಡಿಲ್ಲ. ಗ್ರಾಮ ಪಂಚಾಯಿತಿ ಅಧ್ಯಕ್ಷ ಸೇರಿದಂತೆ ಹಲವರು ಹಣ ಪಡೆದು ಮನೆಗಳನ್ನು ಹಂಚಿಕೆ ಮಾಡಿದ್ದು. ಇವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಿ – ಎಂದು ವಿನಂತಿಸಿಕೊಂಡಿದ್ದರು.
ತಮ್ಮ ಮೇಲೆ ಆರೋಪ ಮಾಡಿದ್ದರಿಂದ ಆಕ್ರೋಶಗೊಂಡು ಇಂದು ಬೆಳಗ್ಗೆ ನೂರಕ್ಕೂ ಅಧಿಕ ಜನರು ಸೇರಿ ಶೆಟ್ಟು ನಾಯಕ್ ಮನೆಯ ಮೇಲೆ ದಾಳಿ ಮಾಡಿ, ದಾಂಧಲೆ ನಡೆಸಿ, ಮನೆ ಮೇಲೆ ಕಲ್ಲು ತೂರಿ, ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ್ದಾರೆಂದು ನಾಯಕ್ ದೂರಿದ್ದಾರೆ.