ಬೆಳಗಾವಿ: ನಾಲ್ವರು ತೆರಳುತಿದ್ದ ಬೈಕ್ ರಸ್ತೆ ಬದಿಯ ತಗ್ಗಿಗೆ ಬಿದ್ದು ನಾಲ್ವರೂ ಮೃತಪಟ್ಟ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ನಗರದ ಹೊರ ವಲಯದಲ್ಲಿ ಗುರುವಾರ ತಡರಾತ್ರಿ ಸಂಭವಿಸಿದೆ.
ಗುರುವಾರ ರಾತ್ರಿ ಸುಮಾರು 11:30 ರ ವೇಳೆ ನಿಯಂತ್ರಣ ತಪ್ಪಿದ ಬೈಕ್ ರಸ್ತೆ ಪಕ್ಕದ ಗುಂಡಿಗೆ ಬಿದ್ದು, ಈ ದರ್ಘಟನೆ ನಡೆದಿದೆ. ಒಂದೇ ಬೈಕ್ ನಲ್ಲಿ ತೆರಳುತ್ತಿದ್ದ ನಾಲ್ವರು ಮೃತಪಟ್ಟಿದ್ದಾರೆ.
ಮೂವರು ಸ್ಥಳದಲ್ಲಿಯೇ ಮೃತಪಟ್ಟರೆ, ಇನ್ನೋರ್ವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ. ಮೃತರನ್ನು ಬಸವರಾಜ ಮಾಳಿ(26), ಪ್ರವೀಣ (29), ಮೆಹಬೂಬ (21), ಫರ್ಹಾನ್ (21) ಎಂದು ಗುರುತಿಸಲಾಗಿದೆ.
ತಡರಾತ್ರಿ ನಾಲ್ವರು ಗೆಳೆಯರು ದ್ವಿಚಕ್ರ ವಾಹನದಲ್ಲಿ ಕಣಗಲಾ ಕಡೆಯಿಂದ ಸಂಕೇಶ್ವರ ಕಡೆಗೆ ಬರುತ್ತಿರುವಾಗ ಬೈಕ್ ನಿಯಂತ್ರಣ ತಪ್ಪಿದ ಪರಿಣಾಮ ರಸ್ತೆ ಪಕ್ಕದ ಗುಂಡಿಗೆ ಬಿದ್ದು ಸಂಕೇಶ್ವರ ನಗರದ ಹೊರ ವಲಯದ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಈ ಅವಘಡ ನಡೆದಿದೆ.
ಘಟನಾ ಸ್ಥಳಕ್ಕೆ ಸಂಕೇಶ್ವರ ಸಿಪಿಐ ಪ್ರಹ್ಲಾದ ಚನ್ನಗಿರಿ, ಪಿಎಸ್.ಐ ಗಣಪತಿ ಕೊಂಗನೊಳಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಂಕೇಶ್ವರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.