ಬೆಂಗಳೂರು : ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ನೌಕರರ ಸಂಘ ಮಾರ್ಚ್ 4ರಂದು ಪ್ರತಿಭಟನೆ ಏರ್ಪಡಿಸಿರುವದರಿಂದ ಆ ದಿನ ಶಾಲೆ, ಕಾಲೇಜು ಅನಧಿಕೃತ ರಜೆ ಪಡೆಯಲಿವೆ.
ಅನುದಾನಿತ ಶಾಲಾ ಕಾಲೇಜು ನೌಕರರಿಗೆ ಪಿಂಚಣಿ ಸೌಲಭ್ಯ ಒದಗಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಾರ್ಚ್ 4 ರಂದು ರಾಜ್ಯದಾದ್ಯಂತ ಅನುದಾನಿತ ಶಾಲಾ ಕಾಲೇಜುಗಳು ಬಂದ್ ಮಾಡಲು ಶಾಲಾ ಕಾಲೇಜು ನೌಕರರ ಸಂಘ ಮುಂದಾಗಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸೋದಾಗಿ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘದ ಅಧ್ಯಕ್ಷ ಡಿ.ಸಿ ಗೋಪಿನಾಥ್ ತಿಳಿಸಿದ್ದಾರೆ. ಫ್ರೀಡಂ ಪಾರ್ಕ್ ನಿಂದ ವಿಧಾನಸೌಧದ ವರೆಗೆ ರ್ಯಾಲಿ ನಡೆಯಲಿದೆ.
ನೌಕರರ ಪ್ರಮುಖ ಬೇಡಿಕೆಗಳಾದ 2006ಕ್ಕೂ ಮೊದಲು ನೇಮಕವಾಗಿ ನಂತರ ಅನುದಾನಕ್ಕೊಳಪಟ್ಟ ಹಾಲಿ ಕಾರ್ಯ ನಿರ್ವಹಿಸುತ್ತಿರುವ ಹಾಗೂ ನಿವೃತ್ತರಾಗಿರುವ ನೌಕರರ ಸೇವಾ ಅವಧಿಯನ್ನ ಕಾಲ್ಪನಿಕವಾಗಿ ಪರಿಗಣಿಸಿ, ಹಳೆಯ ನಿಶ್ಚಿತ ಪಿಂಚಣಿ ಸೌಲಭ್ಯ ನೀಡುವುದು. 2006ರ ನಂತರ ನೇಮಕವಾದ ನೌಕರರಿಗೆ ನೂತನ ಪಿಂಚಣಿ ಯೋಜನೆಯನ್ನ ನೌಕರರಿಗೆ ನೀಡಬೇಕು ಹಾಗೂ ನೌಕರರ ಪಾಲಿನ ಶೇ.14 ರಷ್ಟು ಹಣವನ್ನು ಆಡಳಿತ ಮಂಡಳಿಗೆ ನೀಡುವಂತೆ ಒತ್ತಾಯಿಸಿದ್ದಾರೆ.
ಅನುದಾನಿತ ಶಾಲಾ-ಕಾಲೇಜುಗಳ ನೌಕರರಿಗೂ ಆರೋಗ್ಯ ಸಿರಿ ( ಜ್ಯೋತಿ ಸಂಜೀವಿನಿ) ಯೋಜನೆಯನ್ನ ಜಾರಿಗೆ ತರಬೇಕು. ಖಾಲಿ ಹುದ್ದೆಗಳನ್ನ ತುಂಬಿಕೊಳ್ಳಲು ವಿಧಿಸಿರುವ ನಿಯಮಗಳನ್ನ ಸಡಿಲಗೊಳಿಸಬೇಕು. ಸರ್ಕಾರಿ ಶಾಲಾ ಮಕ್ಕಳಿಗೆ ನೀಡುತ್ತಿರುವ ಸೌಲಭ್ಯಗಳನ್ನ ಅನುದಾನಿತ ಶಾಲಾ ಮಕ್ಕಳಿಗೂ ನೀಡಬೇಕೆಂದು ಮನವಿ ಮಾಡಿದ್ದಾರೆ.