ದೆಹಲಿ : 1991ರಲ್ಲಿ ನಡೆದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಗೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಗೊಳಗಾಗಿರುವ ಎ.ಜಿ. ಪೆರಾರಿವಾಲನ್‌ಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
“ಅರ್ಜಿದಾರರು 30 ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದಾರೆ ಎಂಬ ಅಂಶವನ್ನು ಗಣನೆಗೆ ತೆಗೆದುಕೊಂಡು, ಕೇಂದ್ರದ ತೀವ್ರ ವಿರೋಧದ ನಡುವೆಯೂ ಜಾಮೀನಿನ ಮೇಲೆ ಬಿಡುಗಡೆಯಾಗಲು ಅರ್ಹರು ಎಂದು ಪರಿಗಣಿಸಲಾಗಿದೆ. ಪೆರೋಲ್‌ನಲ್ಲಿ ಹೊರಬಂದಾಗ ಅವರ ವಿರುದ್ಧ ಯಾವುದೇ ದೂರುಗಳಿಲ್ಲ,” ಎಂದು ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ ರಾವ್ ಮತ್ತು ಬಿ.ಆರ್.ಗವಾಯಿ ಅವರ ಪೀಠವು ಮಧ್ಯಂತರ ಆದೇಶದಲ್ಲಿ ತಿಳಿಸಿದೆ.
2014ರಲ್ಲಿ ಪೆರಾರಿವಾಲನ್ ಅವರ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಲಾಗಿದೆ. ಅಪರಾಧಿಗೆ ಪ್ರತಿ ತಿಂಗಳ ಮೊದಲ ವಾರದಲ್ಲಿ ಚೆನ್ನೈ ಬಳಿಯ ಸ್ಥಳೀಯ ಪೊಲೀಸ್ ಠಾಣೆಗೆ ಹಾಜರಾಗುವಂತೆ ಷರತ್ತು ವಿಧಿಸಿದೆ.
2016 ರಲ್ಲಿ, ತಮಗೆ ವಿಧಿಸಿದ್ದ ಶಿಕ್ಷೆಯನ್ನು ಬದಲಾಯಿಸುವಂತೆ ಕೋರಿ ಅವರು ಮಾಡಿದ್ದ ಮನವಿಯನ್ನು ನಿರಾಕರಿಸಿದ್ದ ಮದ್ರಾಸ್ ಹೈಕೋರ್ಟ್ ಆದೇಶದ ವಿರುದ್ಧ “ವಿಶೇಷ ರಜೆ ” ಅರ್ಜಿಯನ್ನು ಸಲ್ಲಿಸಿದ್ದರು.
ಮೇ 21, 1991 ರಂದು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಚುನಾವಣಾ ಪ್ರಚಾರಕ್ಕಾಗಿ ನಡೆಯುತ್ತಿದ್ದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂನ (ಎಲ್‌ಟಿಟಿಇ) ಸದಸ್ಯೆ ಧನು ಎಂಬ ಮಹಿಳಾ ಆತ್ಮಾಹುತಿ ಬಾಂಬರ್ ರಾಜೀವ್ ಗಾಂಧಿಯವರನ್ನು ಹತ್ಯೆಗೈದಿದ್ದರು. ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಧನು ಸೇರಿದಂತೆ ಹದಿನಾಲ್ಕು ಮಂದಿ ಸಾವನ್ನಪ್ಪಿದ್ದರು.
ಗಾಂಧಿಯವರ ಹತ್ಯೆಯು ಭಾರತದ ಮೊದಲ ಆತ್ಮಹತ್ಯಾ ಬಾಂಬ್ ದಾಳಿ ಪ್ರಕರಣವಾಗಿದೆ.
ಪ್ರಕರಣದಲ್ಲಿ ಪೆರಾರಿವಾಲನ್, ಮುರುಗನ್, ಸಂತಮ್ ಮತ್ತು ನಳಿನಿ ಎಂಬ ನಾಲ್ವರು ಅಪರಾಧಿಗಳು ಶಿಕ್ಷೆ ಒಳಪಟ್ಟಿದ್ದರು. ಏಪ್ರಿಲ್ 2000 ರಲ್ಲಿ, ತಮಿಳುನಾಡು ರಾಜ್ಯಪಾಲರು ರಾಜ್ಯ ಸರ್ಕಾರದ ಶಿಫಾರಸು ಮತ್ತು ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಮತ್ತು ರಾಜೀವ್ ಗಾಂಧಿಯವರ ಪತ್ನಿ ಸೋನಿಯಾ ಗಾಂಧಿಯವರ ಮನವಿಯ ಆಧಾರದ ಮೇಲೆ ಅಪರಾಧಿ ನಳಿನಿಯ ಶಿಕ್ಷೆಯನ್ನು ಕಡಿಮೆಗೊಳಿಸಿದ್ದರು. ಫೆಬ್ರವರಿ 18, 2014 ರಂದು, ಸುಪ್ರೀಂ ಕೋರ್ಟ್ ಪೆರಾರಿವಾಲನ್ ಅವರ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿತು.