ನವದೆಹಲಿ: ಕರ್ನಾಟಕದ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದನ್ನು ನಿಷೇಧಿಸುವ ಕಾಲೇಜುಗಳ ಅಧಿಕಾರವನ್ನು ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧದ ಮೇಲ್ಮನವಿಗಳನ್ನು ತುರ್ತು ವಿಚಾರಣೆ ನಡೆಸಬೇಕೆಂಬ ಮನವಿಯನ್ನು ಸುಪ್ರೀಂ ಕೋರ್ಟ್ ಗುರುವಾರ ತಿರಸ್ಕರಿಸಿದೆ.
ಈ ವಿಷಯವನ್ನು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್‌ವಿ ರಮಣ ಅವರ ಮುಂದೆ ಹಿರಿಯ ವಕೀಲ ದೇವದತ್ತ್ ಕಾಮತ್ ಪ್ರಸ್ತಾಪಿಸಿದರು. ಆದರೆ ಮುಖ್ಯನ್ಯಾಯಮೂರ್ತಿಗಳು ಅರ್ಜಿದಾರರಿಗೆ ಈ ವಿಷಯವನ್ನು ಅತಿರಂಜಿತಗೊಳಿಸಬೇಡಿ ಎಂದು ಕೇಳಿಕೊಂಡರು ಮತ್ತು ವಿಷಯದ ವಿಚಾರಣೆಗೆ ಯಾವುದೇ ನಿರ್ದಿಷ್ಟ ದಿನಾಂಕವನ್ನು ನೀಡಲು ನಿರಾಕರಿಸಿದ್ದಾರೆ ಎಂದು ಬಾರ್ ಅಂಡ್ ಬೆಂಚ್ ವರದಿ ಮಾಡಿದೆ.
ವಿದ್ಯಾರ್ಥಿನಿಯರಿಗೆ ಪರೀಕ್ಷೆಗಳು ಸಮೀಪಿಸುತ್ತಿವೆ ಎಂದು ವಕೀಲ ಕಾಮತ್ ಅವರು ಹೇಳಿದಾಗ ಇದಕ್ಕೂ ಪರೀಕ್ಷೆಗಳಿಗೂ ಯಾವುದೇ ಸಂಬಂಧವಿಲ್ಲ. ಸಮಸ್ಯೆಯನ್ನು ಅತಿರಂಜಿತಗೊಳಿಸಬೇಡಿ ಎಂದು ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಹೇಳಿದರು.
ಕರ್ನಾಟಕ ಹೈಕೋರ್ಟ್ ಮಾರ್ಚ್ 15 ರಂದು, ಕಾಲೇಜು ಕ್ಯಾಂಪಸ್‌ನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ (ಶೀರ್ಷವಸ್ತ್ರ) ಧರಿಸುವುದನ್ನು ನಿಷೇಧಿಸಲು ರಾಜ್ಯದ ಸರ್ಕಾರಿ ಕಾಲೇಜುಗಳ ಕಾಲೇಜು ಅಭಿವೃದ್ಧಿ ಸಮಿತಿಗಳಿಗೆ ಪರಿಣಾಮಕಾರಿಯಾಗಿ ಅಧಿಕಾರ ನೀಡುವ ಸರ್ಕಾರಿ ಆದೇಶವನ್ನು (GO) ಎತ್ತಿಹಿಡಿದಿತ್ತು. ಹಾಗೂ ಹಿಜಾಬ್ ಇಸ್ಲಾಂನ ಅವಿಭಾಜ್ಯ ಅಂಗವಲ್ಲ ಎಂದು ಹೇಳಿತ್ತು.
ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ ಮತ್ತು ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್ ಮತ್ತು ಜೆ.ಎಂ. ಖಾಜಿ ಅವರ ತ್ರಿಸದಸ್ಯ ಪೀಠವು ತನ್ನ ತೀರ್ಪಿನಲ್ಲಿ ಹಿಜಾಬ್ ಇಸ್ಲಾಂ ಧರ್ಮದ ಅಗತ್ಯ ಧಾರ್ಮಿಕ ಆಚರಣೆಗಳ ಭಾಗವಲ್ಲ, ಸಮವಸ್ತ್ರದ ಅವಶ್ಯಕತೆಯು ಆರ್ಟಿಕಲ್ 19(1)(ಎ) ಅಡಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ಮೇಲೆ ಸಮಂಜಸವಾದ ನಿರ್ಬಂಧವಾಗಿದೆ ಹಾಗೂ ಸರ್ಕಾರಿ ಆದೇಶವನ್ನು ಅನ್ನು ರವಾನಿಸಲು ಸರ್ಕಾರಕ್ಕೆ ಅಧಿಕಾರವಿದೆ ಎಂದು ಹೇಳಿತ್ತು.