ಪಣಜಿ : “ನಾವು ಚುನಾಯಿತರಾದರೆ ಪಕ್ಷಾಂತರ, ಭ್ರಷ್ಟಾಚಾರ ಮಾಡುವದಿಲ್ಲ, ಪಕ್ಷಕ್ಕೆ ಎಲ್ಲಹಂತದಲ್ಲೂ ನಿಷ್ಠರಾಗಿರುತೇವೆ,” ಎಂದು ಆಮ್ ಆದ್ಮಿ ಪಾರ್ಟಿ ಯಿಂದ ಗೋವಾ ಚುನಾವಣೆಗೆ ಸ್ಪರ್ದಿಸಿರುವ ಎಲ್ಲ 40 ಅಭ್ಯರ್ಥಿಗಳೂ ಆಫಿಡವಿಟ್ ಬರೆದು ಸಹಿ ಮಾಡಿರುತ್ತಾರೆ.
ಪಕ್ಷದ ಸಂಚಾಲಕರೂ ದಿಲ್ಲಿಯ ಮುಖ್ಯಮಂತ್ರಿ ಗಳೂ ಆಗಿರುವ ಅರವಿಂದ್ ಕೇಜ್ರಿವಾಲ್ ಅವರ ಸಮುಖದಲ್ಲಿ ಆಫಿಡವಿಟ್ ಬರೆದು ಸಹಿಮಾಡಿ, ಅದರ ಪ್ರತಿಗಳನ್ನು ಮಾಡಿಸಿ ಮತದಾರರಿಗೆ ಕೊಡುವ ಭರವಸೆ ನೀಡಿರುತ್ತಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಕೇಜ್ರಿವಾಲ್ “ಚುನಾಯಿತ ಪ್ರತಿನಿಧಿಗಳ ಪಕ್ಷಾಂತರವೇ ಗೋವೆಯ ಬಹುದೊಡ್ಡ ರಾಜಕೀಯ ಸಮಸ್ಯೆ. ಇದನ್ನು ಸಂಪೂರ್ಣವಾಗಿ ತೆಗೆದು ಹಾಕಲು ಆಪ್ ಪ್ರಯತ್ನಿಸಲಿದೆ. ಈ ಉದ್ದೇಶಕ್ಕೇ ಪಕ್ಷದ ಅಭ್ಯರ್ಥಿಗಳಿಂದ ಆಫಿಡವಿಟ್ ಮಾಡಿಸಲಾಗಿದೆ. ಚುನಾಯಿತರಾದ ನಂತರ ಅವರ ಅವಧಿಯಲ್ಲಿ ಪಕ್ಷಾಂತರ ಮಾಡಲ್ಲವೆಂದು ಅದರಲ್ಲಿ ವಿಶೇಷವಾಗಿ ನಮೂದಿಸಲಾಗಿದೆ.
ಒಂದು ವೇಳೆ ಪಕ್ಷಾಂತರ, ಇಲ್ಲವೇ ಭ್ರಷ್ಟಾಚಾರವೆಸಗಿದು ಕಂಡು ಬಂದರೆ, ವಿಶ್ವಾಸ ದ್ರೋಹದ ಪ್ರಕರಣ ನ್ಯಾಯಾಲಯದಲ್ಲಿ ಜನ ದಾಖಲು ಮಾಡಬಹುದೆಂದು ಅವರು ತಿಳಿಸಿದರು. ಪಕ್ಷ ಗೆದ್ದರೆ ಗೋವಾದಲ್ಲಿ ಸ್ವಚ್, ಪ್ರಾಮಾಣಿಕ ಸರಕಾರ ನೀಡುವ ಬರವಸೆಯನ್ನು ಅವರು ನೀಡಿದರು.
40 ಸ್ಥಾನಗಳ ಗೋವಾ ವಿಧಾನಸಭೆಗೆ ಫೆಬ್ರವರಿ 14ರಂದು ಒಂದೇ ಹಂತದಲ್ಲಿ ಚುನಾವಣೆ ನಡೆದು, ಮಾರ್ಚ್ 10ರಂದು ಫಲಿತಾಂಶ ಬರಲಿದೆ.