ಶಿವಮೊಗ್ಗ: ತಮ್ಮ ಭವಿಷ್ಯಕ್ಕಿಂತ ತಮ್ಮ ಧಾರ್ಮಿಕ ಕಟ್ಟಳೆಗಳನ್ನು ಪಾಲಿಸುವದೇ ಶ್ರೇಷ್ಠವೆಂದು ಭಾವಿಸಿಕೊಂಡಿರುವ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವದಕ್ಕೆ ಅವಕಾಶ ನೀಡದಿರುವದರಿಂದ ಪರೀಕ್ಷೆಯನ್ನೇ ಬಹಿಷ್ಕರಿಸಿದ್ದಾರೆ.
ಶಿವಮೊಗ್ಗದ – ಮೇನ್ ಮಿಡ್ಲ್ ಸ್ಕೂಲ್- ನಲ್ಲಿ ಇಂದು, ಸೋಮವಾರ ಎಸ್ಎಸ್ಎಲ್ಸಿ ಪೂರ್ವಸಿದ್ಧತಾ ಪರೀಕ್ಷೆ ನಡೆಯುತ್ತಿತ್ತು. ಹೈಕೋರ್ಟ್ ಮಧ್ಯಂತರ ಆದೇಶದ ಮಧ್ಯೆಯೂ 13 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ಸ್ಕೂಲ್ ಗೆ ಪರೀಕ್ಷೆ ಬರೆಯಲು ಬಂದಿದ್ದರು.
ಹಿಜಾಬ್ ಧರಿಸಿ ಶಾಲೆಗೆ ಬಂದಿದ್ದ 13 SSLC ವಿದ್ಯಾರ್ಥಿನಿಯರನ್ನು ಶಾಲೆಯ ಮುಖ್ಯ ದ್ವಾರದ ಬಳಿ ತಡೆದ ಶಾಲಾ ಶಿಕ್ಷಕಿಯರು ಹಾಗೂ ಸಿಬ್ಬಂದಿ – ಕೋರ್ಟ್ ಆದೇಶಿಸಿದೆ, ಆದರಿಂದ ಹಿಜಾಬ್ ತೆಗೆದು ಒಳಗೆ ಬನ್ನಿ, ಪೂರ್ವ ಸಿದ್ದತಾ ಪರೀಕ್ಷೆಯಿದೆ ಅಲಕ್ಷ ಮಾಡಬೇಡಿ – ಎಂದು ಸೂಚಿಸಿದ್ದಾರೆ. ಆದರೆ, ಇದಕ್ಕೆ ವಿದ್ಯಾರ್ಥಿಗಳು ಒಪ್ಪಿಲ್ಲ.
“ನಮಗೆ ಹೈಕೋರ್ಟ್ ಆದೇಶಕ್ಕಿಂತ, ನಮ್ಮ ಧರ್ಮದ ತತ್ವಗಳೇ ಮುಖ್ಯ. ನೀವು ಹಿಜಾಬ್ ದೊಂದಿಗೆ ನಮ್ಮನ್ನು ಅನುಮತಿಸದಿದ್ದರೆ, ನಾವು ಪರೀಕ್ಷೆಗೆ ಹಾಜರಾಗುವದಿಲ್ಲ,” ಎಂದು ಹೇಳಿದರು.
ಆದರೆ ಕೋರ್ಟ್ ಆದೇಶ ಪಾಲಿಸಿದ ಶಾಲಾ ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸಿದರಿಂದ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿನಿಯರು ಮನೆಗೆ ಮರಳಿದರು.
ಹಿಜಾಬ್ ವಿವಾದ ಕುರಿತು ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯತ್ತಿದ್ದು, ತೀರ್ಪು ಬರುವವರೆಗೆ ಯಾವುದೇ ಧಾರ್ಮಿಕ ಉಡುಗೆ ಧರಿಸಿ ಶಾಲಾ ಕಾಲೇಜಿಗೆ ತೊಡುವಂತಿಲ್ಲ ಎಂದು ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.