No menu items!
Wednesday, February 5, 2025

ಮಹಾತ್ಮಾ ಗಾಂಧಿ ಹಂತಕ “ಗೋಡ್ಸೆ ನನ್ನ ಆದರ್ಶ,” ಮಕ್ಕಳ ಚರ್ಚಾಸ್ಪರ್ಧೆ ವಿಷಯ

Must read

ಗುಜರಾತ್ : ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರ ಬಂದ ನಂತರ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಹಂತಕ ನಾಥೂರಾಂ ಗೋಡ್ಸೆಯನ್ನು ನಾಯಕ, ದೇಶಪ್ರೇಮಿ ಎಂದು ಬಿಂಬಿಸುವ ಪ್ರಯತ್ನಗಳು ನಡೆಯುತ್ತಲೇ ಇದೆ. ಇದರ ಇನ್ನೊಂದು ಆಘಾತಕಾರಿ ಭಾಗವಾಗಿ ಗುಜರಾತ್‌ನ ಶಿಕ್ಷಣ ಇಲಾಖೆ ಶಾಲೆಯೊಂದರಲ್ಲಿ “ಗೋಡ್ಸೆ ನನ್ನ ಆದರ್ಶ” ಎನ್ನುವ ವಿಷಯವನ್ನು ಪುಟ್ಟ ಮಕ್ಕಳ ತಲೆಯಲ್ಲಿ ತುಂಬಲು ಪ್ರಯತ್ನಿಸಲಾಗಿದೆ.

ಸೋಮವಾರ (ಫೆ.14) ವಲ್ಸಾದ್ ನಗರದ ಕುಸುಮ್ ವಿದ್ಯಾಲಯ ಶಾಲೆಯಲ್ಲಿ ‘ನನ್ನ ಆದರ್ಶ ನಾಥೂರಾಂ ಗೋಡ್ಸೆ’ ಎಂಬ ವಿಷಯದ ಕುರಿತು ಚರ್ಚಾ ಸ್ಪರ್ಧೆಯನ್ನು ನಡೆಸಲಾಗಿತ್ತು.

5ನೇ ತರಗತಿಯಿಂದ 8ನೇ ತರಗತಿವರೆಗಿನ ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ತಿಳಿಸಲಾಗಿತ್ತು.
ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಒಂದು ಮಗುವಿಗೆ ಪ್ರಥಮ ಬಹುಮಾನ ನೀಡಲಾಯಿತು. ಈಗ ಈ ಸ್ಪರ್ಧೆಯ ಬಗ್ಗೆ ಸಾಕಷ್ಟು ಘರ್ಷಣೆ ಪ್ರಾರಂಭವಾಗಿದೆ. ಇದರಲ್ಲೂ 7 ರಿಂದ 12 ವರ್ಷದ ಪ್ರಾಥಮಿಕ ಶಾಲಾ ಮಕ್ಕಳಿಗೆ ಈ ವಿಷಯವನ್ನು ಸ್ಥಳೀಯ ಮಟ್ಟದಲ್ಲಿ ಸರ್ಕಾರಿ ಅಧಿಕಾರಿಗಳು ಆಯ್ಕೆ ಮಾಡಿದ್ದಾರೆ ಎಂಬುದೇ ಆಘಾತಕಾರಿಯಾಗಿದೆ.

“ಅಹಿಂಸೆಯ ಬೋಧಕ, ಪ್ರತಿಪಾದಕ ಗಾಂಧೀಜಿಯವರನ್ನು ಹತ್ಯೆ ಮಾಡಿದವರು ಹೇಗೆ ಆದರ್ಶರಾಗುತ್ತಾರೆ..? “ಎಂದು ಗಾಂಧಿವಾದಿಗಳು ಆಕ್ಷೇಪ ವ್ಯಕ್ತಪಡಿಸಿ, ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು,” ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ವಿವಾದದ ಹಿನ್ನೆಲೆಯಲ್ಲಿ ವಲ್ಸಾದ್ ಜಿಲ್ಲಾ ಕ್ರೀಡಾ ಅಧಿಕಾರಿ ಮಿತಾಬೆನ್ ಗಾವ್ಲಿ ಅವರನ್ನು ಅಮಾನತುಗೊಳಿಸಲಾಗಿದೆ. ಇದರೊಂದಿಗೆ ಗೃಹ ಸಚಿವ ಹರ್ಷ ಸಾಂಘ್ವಿ ಅವರು ಇಡೀ ಪ್ರಕರಣದ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಮತ್ತು ಹೊಣೆಗಾರರ ​​ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ವಿವಾದ ಭುಗಿಲೆದ್ದ ಹಿನ್ನೆಲೆಯಲ್ಲಿ “ದೈನಿಕ್ ಭಾಸ್ಕರ್‌” ಮಾಧ್ಯಮದೊಂದಿಗೆ ಮಾತನಾಡಿರುವ ಕುಸುಮ ವಿದ್ಯಾಲಯದ ನಿರ್ದೇಶಕಿ ಅರ್ಚನಾಬೆನ್ ದೇಸಾಯಿ, “ಬಾಲಪ್ರತಿಭೆ ಸಂಶೋಧನಾ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಈ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಯ ಸಂಪೂರ್ಣ ಯೋಜನೆಯನ್ನು ಸರ್ಕಾರಿ ಕಾರ್ಯಾಲಯದಿಂದ ಸಿದ್ಧಪಡಿಸಲಾಗಿತ್ತು. ಹೀಗಾಗಿ ನಮ್ಮ ಶಾಲೆಯು ಸ್ಪರ್ಧೆ ನಡೆಸಲು ಸ್ಥಳವನ್ನು ಮಾತ್ರ ನೀಡಿತ್ತು. ಈ ಮೂಲಕ ವಲ್ಸಾದ್ ಸರ್ಕಾರಿ ಕಚೇರಿಯ ಆದೇಶವನ್ನು ಪಾಳಿಸಿದೆ. ಸ್ಪರ್ಧೆ ಪ್ರಾರಂಭದ ಮೊದಲು ಅದರಲ್ಲಿರುವ ವಿಷಯಗಳ ಬಗ್ಗೆ ನಮಗೆ ತಿಳಿದಿರಲಿಲ್ಲ” ಎಂದಿದ್ದಾರೆ.

“ಈ ಸ್ಪರ್ಧೆಯಲ್ಲಿ ‘ನನ್ನ ಆದರ್ಶ ನಾಥೂರಾಂ ಗೋಡ್ಸೆ’, ‘ಆಕಾಶದಲ್ಲಿ ಹಾರಾಡುವ ಹಕ್ಕಿಗಳು ನನಗೆ ಇಷ್ಟ’ ಮತ್ತು ‘ವಿಜ್ಞಾನಿಯಾದ ನಂತರವೂ ನಾನು ಅಮೆರಿಕಕ್ಕೆ ಹೋಗುವುದಿಲ್ಲ’ ಎಂಬ ಮೂರು ವಿಷಯಗಳನ್ನು ನೀಡಲಾಗಿತ್ತು. ಈ ಮೂರು ವಿಷಯಗಳ ಬಗ್ಗೆ ಮಕ್ಕಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು” ಎಂದಿದ್ದಾರೆ.

ಕಳೆದ ವರ್ಷ ನವೆಂಬರ್ 15 ರಂದು ಜಾಮ್‌ನಗರದಲ್ಲಿ ನಾಥೂರಾಂ ಗೋಡ್ಸೆ ಪ್ರತಿಮೆ ಸ್ಥಾಪನೆ ವಿಚಾರದಲ್ಲಿ ಸಾಕಷ್ಟು ವಿವಾದ ಉಂಟಾಗಿತ್ತು. ಜಾಮ್‌ನಗರದ ಹನುಮಾನ್ ಆಶ್ರಮದಲ್ಲಿ ಹಿಂದೂ ಸೇನೆ ಗೋಡ್ಸೆ ವಿಗ್ರಹವನ್ನು ಸ್ಥಾಪಿಸಿತ್ತು. ಸುದ್ದಿ ತಿಳಿದ ಕಾಂಗ್ರೆಸ್ ಮುಖಂಡರು, ನಗರಸಭೆ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಅಲ್ಲಿಗೆ ಆಗಮಿಸಿ ಪ್ರತಿಮೆ ಧ್ವಂಸಗೊಳಿಸಿದರು. ಬಳಿಕ ಉಭಯ ನಾಯಕರ ಮೇಲೆ ಪೊಲೀಸ್ ದೂರು ದಾಖಲಾಗಿತ್ತು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article

error: Content is protected !!