ಉಡುಪಿ: ಹಿಜಾಬ್ ವಿವಾದ ಪ್ರಕರಣದಲ್ಲಿ ಹೈಕೋರ್ಟ್ ಮೆಟ್ಟಿಲೇರಿರುವ ವಿದ್ಯಾರ್ಥಿನಿಯ ತಂದೆಗೆ ಸೇರಿದ ರೆಸ್ಟೋರೆಂಟ್ ಮೇಲೆ ಗುಂಪೊಂದು ನಿನ್ನೆ ಸೋಮವಾರ ರಾತ್ರಿ 9:30ರ ಸುಮಾರಿಗೆ ದಾಳಿ ಮಾಡಿದ ಘಟನೆ ಮಲ್ಪೆಯಲ್ಲಿ ನಡೆದಿದೆ ಎಂದು ಆರೋಪಿಸಲಾಗಿದೆ.
ತರಗತಿಯಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡದಿದ್ದಕ್ಕಾಗಿ ಹೈಕೋರ್ಟ್ ಮೆಟ್ಟಿಲೇರಿದ್ದ ಕಾಲೇಜು ವಿದ್ಯಾರ್ಥಿನಿಯರಲ್ಲಿ ಒಬ್ಬರಾದ ಶಿಫಾ ಅವರ ತಂದೆ ಹೈದರ್ ಅಲಿ ಅವರಿಗೆ ಸೇರಿದ ‘ಬಿಸ್ಮಿಲ್ಲಾ ಹೋಟೆಲ್’ ಮೇಲೆ ಸುಮಾರು 50 ಜನರ ಗುಂಪು ಕಲ್ಲು ತೂರಾಟ ನಡೆಸಿದೆ ಎಂದು ಆರೋಪಿಸಲಾಗಿದೆ.
ಅಲ್ಲದೇ ದುಷ್ಕರ್ಮಿಗಳು ಹೊಟೇಲ್ನಲ್ಲಿದ್ದ ಅವರ ಮಗ ಸೈಪ್(20) ಮೇಲೂ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಹೋಟೆಲಿನ ಗಾಜುಗಳು ಪುಡಿಯಾಗಿದೆ ಎಂದು ಆರೋಪಿಸಲಾಗಿದೆ.
ಸೈಫ್ನನ್ನು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಈ ಬಗ್ಗೆ ಹಿಜಾಬ್ ದೂರು ನೀಡಿರುವ ಹಜ್ರಾ ಶಿಫಾ ಟ್ವೀಟ್ ಮಾಡಿದ್ದಾರೆ. “ಹಿಜಾಬ್ ಹೋರಾಟ ಮುಂದುವರಿಸಿದ್ದಕ್ಕಾಗಿ ನನ್ನ ಅಣ್ಣನ ಮೇಲೆ ಹಾಗೂ ನಮ್ಮ ತಂದೆಯ ಮೇಲೆ ದಾಳಿಯಾಗಿದೆ. ನಮ್ಮ ಹಕ್ಕುಗಳಿಗಾಗಿ ಹೋರಾಡುವುದು ತಪ್ಪೇ,” ಎಂದು ಪ್ರಶ್ನಿಸಿದ ಅವರು, ಸಂಘಪರಿವಾರದ ಯುವಕರಿಂದ ಹಲ್ಲೆ ಎಂಬ ಆರೋಪಿಸಿದ್ದಾರೆ.