ಬೆಂಗಳೂರು: ಕರ್ನಾಟಕ ಹೈಕೋರ್ಟ್‌ಗೆ ಹಿಜಾಬ್ ಕುರಿತಾದ ಪ್ರಕರಣದ 11 ದಿನಗಳ ಕಲಾಪವನ್ನು ನ್ಯಾಯಾಲಯದ ಅಧಿಕೃತ ಯು ಟ್ಯೂಬ್ ಚಾನಲ್‍ನಲ್ಲಿ ಬರೋಬ್ಬರಿ 33.5 ಲಕ್ಷ ಮಂದಿ ವೀಕ್ಷಿಸಿದ್ದು, ಇದು ಭಾರತ ನ್ಯಾಯಾಂಗ ಇತಿಹಾಸದಲ್ಲಿ ಹೊಸ ದಾಖಲೆಯಾಗಿದೆ.
ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದ 11 ದಿನಗಳ ಕಲಾಪವನ್ನು ಕರ್ನಾಟಕ ಹೈಕೋರ್ಟ್‌ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ವಿಶ್ವದ ವಿವಿಧೆಡೆಯಿಂದ ಬರೋಬ್ಬರಿ 33.5 ಲಕ್ಷ ಮಂದಿ ವೀಕ್ಷಿಸಿದ್ದು, ಚಂದಾದಾರರ ಸಂಖ್ಯೆ ಒಂದು ಲಕ್ಷ ದಾಟಿದೆ. ಬೇರಾವ ಹೈಕೋರ್ಟ್‌ನ ಚಂದಾದಾರರ ಸಂಖ್ಯೆಯೂ ಒಂದು ಲಕ್ಷ ದಾಟಿಲ್ಲ. ಬಹುತೇಕ ಹೈಕೋರ್ಟ್‌ಗಳಲ್ಲಿ ಯೂಟ್ಯೂಬ್ ಲೈವ್‌ಸ್ಟ್ರೀಮ್ ಇನ್ನಷ್ಟೇ ಆರಂಭವಾಗಬೇಕಿದೆ.
ತರಗತಿಯಲ್ಲಿ ಹಿಜಾಬ್ ನಿಷೇಧಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿದ್ದ ಮನವಿಗಳನ್ನು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್ ಮತ್ತು ಜೆ ಎಂ ಖಾಜಿ ಅವರ ನೇತೃತ್ವದ ಪೀಠವು ಫೆಬ್ರವರಿ 10ರಿಂದ ಫೆಬ್ರವರಿ 25ರ ನಡುವೆ 11 ದಿನ ಕಾಲ ಪ್ರತಿದಿನ ಸರಾಸರಿ ಎರಡು ತಾಸಿನಂತೆ ಒಟ್ಟಾರೆ 23.5 ತಾಸು ವಿಚಾರಣೆ ನಡೆಸಿದೆ. ಶುಕ್ರವಾರ ವಿಚಾರಣೆ ಮುಗಿಸಿ ಪೀಠವು ತೀರ್ಪು ಕಾಯ್ದಿರಿಸಿದೆ.
ವಿಶ್ವದಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿರುವ ಉಡುಪಿಯಲ್ಲಿ ಆರಂಭವಾದ ಹಿಜಾಬ್ ವಿವಾದವು ಮೊದಲಿಗೆ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಿತ್ತು. ಸರ್ಕಾರದ ಕ್ರಮ ಪ್ರಶ್ನಿಸಿ ಹಲವು ಮನವಿ ಸಲ್ಲಿಕೆಯಾಗಿದ್ದು, ಸಾಂವಿಧಾನಿಕ ಅಂಶಗಳು ಅಡಕವಾಗಿರುವುದರಿಂದ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವಹಿಸುವಂತೆ ನ್ಯಾ. ದೀಕ್ಷಿತ್ ಅವರು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರಿಗೆ ಕೋರಿದ್ದರು. ಇದರ ಬೆನ್ನಿಗೇ ಫೆಬ್ರವರಿ 9ರಂದು ಪೂರ್ಣ ಪೀಠ ರಚಿಸಿದ ಮುಖ್ಯ ನ್ಯಾಯಮೂರ್ತಿಗಳು ಫೆ.10ರಿಂದಲೇ ವಿಚಾರಣೆ ಆರಂಭಿಸಿದ್ದರು.
ಪಕ್ಷಕಾರರ ಒಪ್ಪಿಗೆಯೊಂದಿಗೆ ಇಡೀ ಕಲಾಪವನ್ನು ಯೂ ಟ್ಯೂಬ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲು ಪೀಠವು ನಿರ್ಧರಿಸಿತು. ಒಂದು ಹಂತದಲ್ಲಿ ಹಿಜಾಬ್ ಪ್ರಕರಣದ ಲೈವ್ ಸ್ಟ್ರೀಮಿಂಗ್ ಅನ್ನೇ ಗರಿಷ್ಠ 25 ಸಾವಿರ ಮಂದಿ ವೀಕ್ಷಿಸಿದ್ದಾರೆ ಎಂದು ತಿಳಿದುಬಂದಿದ್ದು, ಇದು ಭಾರತದ ನ್ಯಾಯಾಂಗ ಇತಿಹಾಸದಲ್ಲೇ ವಿನೂತನ ಮೈಲಿಗಲ್ಲಾಗಿದೆ.
ನ್ಯಾಯಾಂಗದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರ ನೇತೃತ್ವದ ಇ-ಸಮಿತಿಯು ಎಲ್ಲಾ ನ್ಯಾಯಾಲಯಗಳ ಕಲಾಪಗಳನ್ನು ಯೂ ಟ್ಯೂಬ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲು ಆದೇಶ ಮಾಡಿದೆ. ಇದರ ಭಾಗವಾಗಿ ದೇಶದಲ್ಲೇ ಮೊದಲ ಬಾರಿಗೆ ಗುಜರಾತ್ ಹೈಕೋರ್ಟ್ ಯೂಟ್ಯೂಬ್ ಲೈವ್ ಸ್ಟ್ರೀಮಿಂಗ್ ಆರಂಭಿಸಿತ್ತು. ಇದರ ಬೆನ್ನಿಗೇ ಕರ್ನಾಟಕ ಹೈಕೋರ್ಟ್ ಸಹ ಹಿಂದಿನ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ್ ಅವರ ಸೂಚನೆಯ ಮೇರೆಗೆ ಪ್ರಾಯೋಗಿಕವಾಗಿ ಕಲಾಪವನ್ನು ಲೈವ್ ಸ್ಟ್ರೀಮ್ ಮಾಡುವ ಪ್ರಕ್ರಿಯೆ ಆರಂಭಿಸಿತ್ತು.
ಮುಖ್ಯ ನ್ಯಾಯಮೂರ್ತಿಯಾಗಿರುವ ರಿತುರಾಜ್ ಅವಸ್ಥಿ ಅವರು ಕಲಾಪ ಲೈವ್‌ಸ್ಟ್ರೀಮ್ ಕಡ್ಡಾಯ ಮಾಡುವುದಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಗಳ ಹಿನ್ನೆಲೆಯಲ್ಲಿ “ಕರ್ನಾಟಕ ನ್ಯಾಯಾಲಯ ಕಲಾಪಗಳ ನೇರಪ್ರಸಾರ (ಲೈವ್‌ಸ್ಟ್ರೀಮ್) ಮತ್ತು ರೆಕಾರ್ಡಿಂಗ್ ನಿಯಮಗಳು 2021” ಅನ್ನು ಜಾರಿ ಮಾಡಿ, ಜನವರಿ 1ರಿಂದಲೇ ನಿಯಮಗಳು ಅಸ್ತಿತ್ವಕ್ಕೆ ಬರುವಂತೆ ಕಟ್ಟುನಿಟ್ಟಿನ ಆದೇಶ ಮಾಡಿದ್ದರು. ಆ ಬಳಿಕ ಪ್ರತಿದಿನ ಕರ್ನಾಟಕ ಹೈಕೋರ್ಟ್‌ನ ಕೆಲವು ಪೀಠಗಳ ವಿಚಾರಣೆಯನ್ನು ಹೈಕೋರ್ಟ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತಿದೆ. ಈ ಬೆನ್ನಿಗೇ, ಹಿಜಾಬ್ ಪ್ರಕರಣವು ನ್ಯಾಯಾಲಯದ ಮೆಟ್ಟಿಲೇರಿದ ನಂತರ ಕಲಾಪ ವೀಕ್ಷಣೆ ಮತ್ತು ಚಂದಾದಾರರ ಸಂಖ್ಯೆಯಲ್ಲಿ ಕರ್ನಾಟಕ ಹೈಕೋರ್ಟ್‌ನ ಯೂಟ್ಯೂಬ್ ಚಾನೆಲ್ ಗಣನೀಯ ಏರಿಕೆ ದಾಖಲಿಸಿತು.
ಕರ್ನಾಟಕ ಹೈಕೋರ್ಟ್‌ನ ಯೂಟ್ಯೂಬ್ ಚಾನೆಲ್ ಅನ್ನು 2020ರ ಮೇ 16ರಂದು ಆರಂಭಿಸಲಾಗಿದ್ದು, ಒಟ್ಟಾರೆ 206 ವಿಡಿಯೊಗಳು ಈವರೆಗೆ ಅಡಕಗೊಂಡಿವೆ. ಎಲ್ಲಾ ವಿಡಿಯೊಗಳಿಂದ ಸುಮಾರು 63.18 ಲಕ್ಷ ವೀಕ್ಷಣೆ ದಾಖಲಾಗಿದೆ. ಈ ಪೈಕಿ ಹಿಜಾಬ್‌ಗೆ ಸಂಬಂಧಿಸಿದ 11 ವಿಡಿಯೊಗಳನ್ನು 33.5 ಲಕ್ಷ ಮಂದಿ ವೀಕ್ಷಿಸಿದ್ದಾರೆ ಎಂದು ಬಾರ್ ಅಂಡ್ ಬೆಂಚ್ ವರದಿ ಮಾಡಿದೆ.