ಮುಂಬೈ: ಮುಂಬೈನ ಬಾಂದ್ರಾ ಹೌಸಿಂಗ್ ಸೊಸೈಟಿಯ ಕಾಂಪೌಂಡ್ ಗೋಡೆಗೆ ತಮ್ಮ ಕಾರನ್ನು ಡಿಕ್ಕಿ ಹೊಡೆಸಿದ ಕಾರಣಕ್ಕೆ ಭಾರತದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಅವರನ್ನು ಬಾಂದ್ರಾ ಪೊಲೀಸರು ಭಾನುವಾರ ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
ಮಧ್ಯಾಹ್ನ ಕಾಂಬ್ಳಿ ಮದ್ಯಪಾನ ಮಾಡಿ ಬಾಂದ್ರಾ ಹೌಸಿಂಗ್ ಸೊಸೈಟಿಯ ಕಾಂಪೌಂಡ್ ಗೋಡೆಗೆ ತಮ್ಮ ಕಾರನ್ನು ಡಿಕ್ಕಿ ಹೊಡೆಸಿದಲ್ಲದೇ, ಸೆಕ್ಯೂರಿಟಿ ಗಾರ್ಡ್ ಹಾಗೂ ಸೊಸೈಟಿಯ ನಿವಾಸಿಗಳೊಂದಿಗೆ ವಾಮಾಡಿದ್ದರು. ಮದ್ಯದ ಮತ್ತಿನಲ್ಲಿದ್ದ ಅವರ ವಿರುದ್ಧ ಪೊಲೀಸರಿಗೆ ಮಾಹಿತಿ ನೀಡಿ, ದೂರೂ ದಾಖಲಾಗಿತ್ತು.
ಬಾಂದ್ರಾ ಹೌಸಿಂಗ್ ಸೊಸೈಟಿಯ ನಿವಾಸಿಯೊಬ್ಬರು ನೀಡಿದ ದೂರಿನ ಮೇರೆಗೆ 50 ವರುಷದ ಕಾಂಬ್ಳಿ ಅವರನ್ನು ಬಂಧಿಸಿ – ಅವರ ವಿರುದ್ಧ ಭಾರತೀಯ ದಂಡ ಮೋಟಾರು ವಾಹನ ಕಾಯಿದೆಯ 185 (ಮದ್ಯದ ಅಮಲಿನಲ್ಲಿ ಚಾಲನೆ) ದೂರು ದಾಖಲಾಗಿತ್ತು, ನಂತರ ಜಾಮೀನಿನ ಮೇಲೆ ಬಿಡುಗಡೆಯಾದರು.
ಕಾಂಬ್ಳಿ 17 ಟೆಸ್ಟ್ ಪಂದ್ಯಗಳನ್ನಾಡಿ 4 ಶತಕ ಸೇರಿದಂತೆ 1084 ರನ್ ಗಳಿಸಿದ್ದಾರೆ. ಅವರು ಭಾರತಕ್ಕಾಗಿ 104 ಏಕದಿನದ ಪಂದ್ಯಗಳನ್ನು ಆಡಿದ್ದಾರೆ, 2 ಶತಕಗಳು ಸೇರಿದಂತೆ 2477 ರನ್ ಗಳಿಸಿದ್ದಾರೆ.
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಆತ್ಮೀಯ ಮಿತ್ರರೂ ಸಮಕಾಲಿನವರೂ ಆಗಿದ್ದ ಮುಂಬೈ ಬ್ಯಾಟರ್ 1991 ರಲ್ಲಿ ಭಾರತಕ್ಕೆ ಪಾದಾರ್ಪಣೆ ಮಾಡಿದರು ಮತ್ತು ಅಕ್ಟೋಬರ್ 2000 ರಲ್ಲಿ ತಮ್ಮ ಕೊನೆಯ ಪಂದ್ಯವನ್ನು ಆಡಿದರು.