ಅರಕಲಗೂಡು : ಸಾರ್ವಜನಿಕ ಸ್ಥಳದಲ್ಲಿ ದಲಿತರು ಕಬ್ಬಿನ ಹಾಲಿನ ಅಂಗಡಿ ಇಟ್ಟಿದ್ದನ್ನು ಪ್ರಶ್ನಿಸಿ, ದಲಿತರು ಮಾಡಿಕೊಟ್ಟ ಕಬ್ಬಿನ ಹಾಲನ್ನು ಕುಡಿಯಬೇಕಾ? ಎಂದು ದೌರ್ಜನ್ಯವೆಸಗಿ ಇಬ್ಬರು ದಲಿತರ ಮೇಲೆ ಹಲ್ಲೆ ನಡೆಸಿರುವ ಘಟನೆ ಅರಕಲಗೂಡು ತಾಲ್ಲೂಕು ರುದ್ರಪಟ್ಟಣ ಸಮೀಪ ಭಾನುವಾರ ನಡೆದಿದೆ.
ರಾಮನಾಥಪುರ ಹೋಬಳಿಯ ರುದ್ರಪಟ್ಟಣ ಗ್ರಾಮದ ಪರಿಶಿಷ್ಟ ಸಮುದಾಯದ ಚಂದ್ರ ಹಾಗೂ ಅವರ ಮಗ ನಿತಿನ್ ಹಲ್ಲೆಗೊಳಗಾಗಿದ್ದು, ಇಲ್ಲಿನ ಕೊಣನೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಚಂದ್ರ ಅವರು ದೂರು ನೀಡಿದ್ದು, “ಗಂಗೂರಿನ ಹ್ಯಾಂಡ್ ಪೋಸ್ಟ್‌ನಲ್ಲಿ ಅಂದರೆ ರಾಮನಾಥಪುರ- ಬೆಟ್ಟದಪುರ ರಸ್ತೆಯ ಪಕ್ಕದಲ್ಲಿ ಕಬ್ಬಿನ ಹಾಲಿನ ಗಾಡಿಯನ್ನು ಇಟ್ಟುಕೊಂಡು ಸುಮಾರು ಆರು ತಿಂಗಳಿಂದ ಜೀವನ ನಡೆಸುತ್ತಿದ್ದೆವು. ಭಾನುವಾರ ಮುಂಜಾನೆ ಸುಮಾರು 10.50ರ ವೇಳೆಯಲ್ಲಿ ಗಂಗೂರಿನ ನಿವಾಸಿ ಸುನಿಲ್ ಎಂಬಾತ ನನ್ನ ಬಳಿ ಬಂದು ಗಾಡಿ ತೆಗೆಯಬೇಕೆಂದು ಹೇಳಿದನು. ಹೊಲೆಯ ಮಾದಿಗರು ಮಾಡಿರುವ ಹಾಲನ್ನು ಎಲ್ಲರೂ ಕುಡಿಯಬೇಕಾ ಎಂದು ಅವ್ಯಾಚ್ಯ ಶಬ್ದಗಳಿಂದ ನಿಂದಿಸಲು ಶುರು ಮಾಡಿದರು,” ಎಂದು ಘಟನೆಯನ್ನು ವಿವರಿಸಿದ್ದಾರೆ.
“ರಸ್ತೆ ಬದಿಯಲ್ಲಿ ಗಾಡಿ ಹಾಕಲು ಯಾರ ಅಪ್ಪಣೆಯೂ ಬೇಕಾಗಿಲ್ಲ. ಜಾಗ ನಿನ್ನದಾಗಿದ್ದರೆ ಹೇಳು, ಗಾಡಿ ತೆಗೆಯುತ್ತೇನೆ. ಆರು ತಿಂಗಳಿಂದ ನಿನ್ನ ತೋಟದ ಮುಂದೆ ಅಂಗಡಿ ಹಾಕಿರುವುದರಿಂದ ದಿನವೂ ನೂರು ರೂಪಾಯಿ ಪಡೆದುಕೊಂಡಿದ್ದೀಯ. ನೀನು ಈ ರೀತಿ ಮಾತನಾಡುವುದು ಸರಿಯೇ ಎಂದು ಕೇಳಿದೆ,” ಎಂದು ದೂರುದಾರ ಚಂದ್ರ ತಿಳಿಸಿದ್ದಾರೆ.
ನಾನು ಪ್ರಶ್ನೆ ಕೇಳಿದ್ದನ್ನು ಸಹಿಸದ ಅವರು, “ಕೀಳು ಜಾತಿಯವನಾದ ನೀನು ನನ್ನನ್ನೇ ಪ್ರಶ್ನಿಸುತ್ತೀಯ ಎಂದನು. ಬಳಿಕ ಹಿಂತಿರುಗಿ ಅವರ ತಂದೆ ರಾಜೇಗೌಡ ಹಾಗೂ ಸಂಬಂಧಿಕರು, ಸ್ನೇಹಿತರನ್ನು ಕರೆದುಕೊಂಡು ಬಂದು ಏಕಾಏಕಿ ನನ್ನ ಮಗನ ಮೇಲೆ ಹಲ್ಲೆ ನಡೆಸಲಾಯಿತು,” ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
“ಗಂಗೂರಿನ ವ್ಯಕ್ತಿ, ಸವರ್ಣಿಯ ಜಾತಿಗೆ ಸೇರಿದ ಗುಂಡ, ಆತನ ಸ್ನೇಹಿತರು ಹಾಗೂ ಎರಂಬನಹಳ್ಳಿ ನಿವಾಸಿ ಸೈಯದ್ ಎಂಬವರು ಹಲ್ಲೆ ನಡೆಸಿದ್ದಾರೆ. ಗಾಡಿಯಲ್ಲಿದ್ದ ಕಬ್ಬನ್ನು ಎಳೆದು ಹಾಕಿ ಗಾಡಿಯನ್ನು ದ್ವಂಸ ಮಾಡಲು ಯತ್ನಿಸಿದ್ದಾರೆ. ನನ್ನ ಹೊಟ್ಟೆ ಮೇಲೆ ಯಾಕೆ ಹೊಡೆಯುತ್ತೀರಿ ಎಂದು ಕೇಳಿದೆ. ಆಗ ಸುನಿಲ್, ರಾಜೇಗೌಡ, ಅವರ ಸಂಬಂಧಿಕರು, ಸ್ನೇಹಿತರು ಹಾಗೂ ಸೈಯದ್ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ,” ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
“ಅದೇ ರಸ್ತೆಯಲ್ಲಿ ಹೋಗುತ್ತಿದ್ದ ರುದ್ರಪಟ್ಟಣದ ಮಲ್ಲೇಶ್, ಜಾವಿದ್ ಪಾಷಾ ನಮ್ಮನ್ನು ಬಿಡಿಸಿಕೊಳ್ಳಲು ಯತ್ನಿಸಿದರು. ಆಗ ನಾನು ಮತ್ತು ನನ್ನ ಮಗ ಪ್ರಾಣಾಪಾಯದಿಂದ ಓಡಿಬಂದೆವು. ಅಲ್ಲೇ ಇದ್ದ ಮಹೇಶ್ ಎಂಬವರು ಮೊಬೈಲ್‌ನಲ್ಲಿ ಘಟನೆಯನ್ನು ಸೆರೆ ಹಿಡಿದಿದ್ದಾರೆ. ವಿಡಿಯೊ ಮಾಡದಂತೆ ಎಚ್ಚರಿಕೆ ನೀಡುತ್ತಾ ಮಹೇಶ್ ಮೇಲೂ ಸುನಿಲ್‌ನ ಸ್ನೇಹಿತನೊಬ್ಬ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಮಹೇಶ್ ಅಲ್ಲಿಂದ ಓಡಿ ಹೋದರು. ಘಟನೆಯ ಬಳಿಕ ಕೊಣನೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೇವೆ” ಎಂದು ಚಂದ್ರ ತಿಳಿಸಿದ್ದಾರೆ.
“ಸವರ್ಣೀಯ ಸಮುದಾಯದಿಂದ ನಮಗೆ ಪ್ರಾಣಾಪಾಯ ಉಂಟಾಗಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು” ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ. ಎಫ್‌ಐಆರ್ ದಾಖಲಾಗಿಲ್ಲ ಎಂದು ಮೂಲಗಳು ತಿಳಿಸಿವೆ.