ಬೆಳಗಾವಿ : ಸಾಮಾಜಿಕ ಕಾರ್ಯಕರ್ತ ಜಯಂತ್ ತಿನ್ನೇಕರ್ ಮೇಲೆ ಕಳೆದ ಮಾರ್ಚ್ 4ರಂದು ಬೆಳಗಾವಿ ಹೊರವಲಯದ ಜಾಡಶಹಪುರ್ ಬಳಿ ನಡೆದಿದೆ ಎನ್ನಲಾದ ಹಲ್ಲೆಗೆ ಸಂಬಂಧಿಸಿದಂತೆ ಪೊಲೀಸರು ಒಂಬತ್ತು ಜನರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಎಂಟು ಜನ ‘ಬಾಡಿಗೆ ಹಲ್ಲೆಕೋರರು’ ಎಂದು ತಿಳಿದುಬಂದಿದೆ.
ಉದ್ಯಮಿ ಲಕ್ಷಣ ಶೆಟ್ಟಿ ಎಂಬವರು ಖಾನಾಪುರ ಹೊರವಲಯದಲ್ಲಿ ಕ್ಲಬ್ ಒಂದನ್ನು ನಡೆಸುತ್ತಿದ್ದು, ಅದು ಸರಕಾರಕ್ಕೆ ಸೇರಿದ ಭೂಮಿಯೆಂದು ಪತ್ತೆ ಹಚ್ಚಿದ್ದ ತಿನ್ನೇಕರ್ ಅದರ ಕುರಿತ ದಾಖಲೆಗಳನ್ನು ” ಮಾಹಿತಿ ಹಕ್ಕು ಕಾಯ್ದೆ” ಯಡಿ ಸಂಬಂದಿಸಿದ ಇಲಾಖೆಗಳಿಂದ ಪಡೆದುಕೊಂಡಿದ್ದರು.
“ಮಾಹಿತಿ ಹಕ್ಕು” ಕಾರ್ಯಕರ್ತರಾದ ತಿನ್ನೇಕರ್, ಲಕ್ಷಣ ಶೆಟ್ಟಿ ನಡೆಸುತ್ತಿರುವ ಕ್ಲಬ್ ಅನಧಿಕೃತ ಅಲ್ಲದೇ ಅದನ್ನು ಸರಕಾರಕ್ಕೆ ಸೇರಿದ್ದ ಜಾಗೆಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಸರಕಾರದ ಗಮನಕ್ಕೆ ತಂದಿದ್ದರು.
“ಇದರಿಂದ ಕುಪಿತಗೊಂಡ ಲಕ್ಷಣ ಶೆಟ್ಟಿ, ಲೋಕೇಶ್ ಕಲ್ಬುರ್ಗಿ ಎಂಬವರನ್ನು ಸಂಪರ್ಕಿಸಿ, ತಿನ್ನೇಕರ್ ಮೇಲೆ ಹಲ್ಲೆ ನಡೆಸಲು ಕೇಳಿಕೊಂಡು, ಪ್ರತಿಯಾಗಿ 50 ಲಕ್ಷ ರೂಪಾಯಿ ಕೊಡಲು ಒಪ್ಪಿಕೊಳ್ಳುತ್ತಾರೆ. ಮೊದಲ ಕಂತೆಂದು 1.50 ಲಕ್ಷ ರೂಪಾಯಿ ನೀಡುತ್ತಾರೆ,” ಎಂದು ಮೂಲಗಳು ತಿಳಿಸಿವೆ.
“ಹಲ್ಲೆ ಮಾಡಲು ಮುಂಗಡ ಹಣ ಪಡೆದ ಲೋಕೇಶ್ ಕಲ್ಬುರ್ಗಿ, ಗಂಗಪ್ಪಾ ಗುಜನಾಬ್, ಭರಮಾ ದಾಸನಟ್ಟಿ, ಸುನಿಲ್ ದಿವಟಗಿ, ಮಂಜುನಾಥ್ ಹೊಸಮನಿ, ಸಚಿನ್ ಯರಝರವಿ, ಈಶ್ವರ ಹುಬ್ಬಳ್ಳಿ ಮತ್ತು ಅಖಿಲೇಶ್ ಯಾಧವ ಎಂಬರನ್ನು ತಿನ್ನೇಕರ್ ಅವರ ಹಲ್ಲೆಗೆ ನಿಯೋಜಿಸುತ್ತಾರೆ, ಅದರಂತೆ, ಈ ಗ್ಯಾಂಗ್ ಅವರ ಮೇಲೆ ಕಳೆದ ಮಾರ್ಚ್ 4ರಂದು ಅವರು ಮುಂಜಾನೆಯ ವಾಕ್ ಮುಗಿಸಿ ಮನೆಗೆ ತೆರಳಿದ್ದಾಗ ಝಡ್ ಶಹಪುರ್ ಬಳಿ ಹಲ್ಲೆ ಮಾಡಿ ಪರಾರಿಯಾಗಿತ್ತು,” ಎಂದು ಮೂಲಗಳು ತಿಳಿಸಿವೆ.
ಹಲ್ಲೆಯಿಂದ ಗಾಯಗೊಂಡಿದ್ದ ತಿನ್ನೇಕರ್ ಪೊಲೀಸರಿಗೆ ದೂರು ಸಲ್ಲಿಸಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.