ಬೆಂಗಳೂರು : ಉಪ್ಪಾರಪೇಟೆ ಠಾಣೆಯಿಂದ ವಿಧಾನಸೌಧ ಠಾಣೆಗೆ ವರ್ಗಾವಣೆಗೊಂಡು 11 ತಿಂಗಳಾದರೂ ಕೆಲಸಕ್ಕೆ ಹಾಜರಾಗದ ಸಹಾಯಕ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಎಎಸ್‌ಐ) ಒಬ್ಬರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಅವರು ಉಪ್ಪಾರಪೇಟೆ ಠಾಣೆಯಲ್ಲಿ ಹಿರಿಯ ಅಧಿಕಾರಿಗಳಿಗೆ ‘ತಿಳಿಯದಂತೆ’ ಅಕ್ರಮ ಕೆಲಸ, ಮಾಡುತ್ತಿದ್ದು, ಭ್ರಷ್ಟಾಚಾರದಲ್ಲಿ ತೊಡಗಿದ್ದರು ಎಂದು ಆರೋಪಿಸಲಾಗಿದೆ.
ಉಪ್ಪಾರಪೇಟೆ ಠಾಣೆಯಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದ ಶ್ರೀನಿವಾಸ್ ಶೆಟ್ಟಿ ಅವರನ್ನು ಕಳೆದ ವರ್ಷದ ಆರಂಭದಲ್ಲಿ ವಿಧಾನಸೌಧ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. 11 ತಿಂಗಳು ಕಳೆದರೂ ಅವರು ಅಲ್ಲಿ ಕೆಲಸಕ್ಕೆ ಹಾಜರಾಗದೆ, ಉಪ್ಪಾರಪೇಟೆ ಠಾಣೆಯಲ್ಲೆ ಅನಧಿಕೃತವಾಗಿ ಕೆಲಸ ಮುಂದುವರೆಸಿದ್ದರು.
“ವಾರಕ್ಕೊಮ್ಮೆ ಅಥವಾ ಹದಿನೈದು ದಿನಕ್ಕೊಮ್ಮೆ ಉಪ್ಪಾರಪೇಟೆ ಠಾಣೆಗೆ ಬರುತ್ತಿದ್ದರು. ಬರುವಾಗ ಅಪರಾಧಗಳಲ್ಲಿ ಭಾಗಿಯಾಗಿರುವ ಕೆಲವು ವ್ಯಕ್ತಿಗಳನ್ನು ಕರೆತರುತ್ತಾರೆ. ನಂತರ ಎಫ್‌ಐಆರ್‌ಗಳನ್ನು ದಾಖಲಿಸದೆ ಹಣ ಸಂಗ್ರಹಿಸಿ ಅವರನ್ನು ಬಿಡುತ್ತಾರೆ. ಅವರು ತಮ್ಮ ಕಾನೂನುಬಾಹಿರ ವ್ಯವಹಾರವನ್ನು ನಡೆಸಲು ಮತ್ತು ಅಪರಾಧಿಗಳೊಂದಿಗೆ ಒಪ್ಪಂದಗಳನ್ನು ಮಾಡಲು ಠಾಣೆಯನ್ನು ಬಳಸಿಕೊಂಡಿದ್ದಾರೆ” ಎಂದು ಮೂಲವೊಂದು ತಿಳಿಸಿದೆ ಎಂದು ಇಂಗ್ಲಿಷ್ ಪತ್ರಿಕೆಯೊಂದು ವರದಿ ಮಾಡಿತ್ತು.