ಬೆಂಗಳೂರು: ಕಾಂಗ್ರೆಸ್ಗೆ ರಾಜೀನಾಮೆ ಕೊಟ್ಟು ಜೆಡಿಎಸ್ ಬಾಗಿಲಲ್ಲಿ ನಿಂತಿರುವ ಸಿ.ಎಂ.ಇಬ್ರಾಹಿಂ ಅವರನ್ನು ಸೋಮವಾರ ವಿಧಾನಸೌಧದ ಕ್ಯಾಂಟೀನ್ ಬಳಿ ಮಾತನಾಡಿಸಿದ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆತುರದ ನಿರ್ಧಾರ ತೆಗೆದುಕೊಳ್ಳುವುದು ಬೇಡ ಎಂದು ಸಲಹೆ ನೀಡಿದ್ದಾರೆ.
ಇಬ್ರಾಹಿಂ ಅವರನ್ನು ನೋಡುತ್ತಲೆ ನಿಂತು ಮಾತನಾಡಿಸಿದ ಸಿದ್ದರಾಮಯ್ಯ ಅವರು, “ಮಾರ್ಚ್ 31ಕ್ಕೆ ಮನೆಗೆ ಬರ್ತೀನಿ, ಅಲ್ಲಿವರೆಗೆ ಸುಮ್ಮನಿರು, ಆತುರಕ್ಕೆ ಬಿದ್ದು ನಿರ್ಧಾರ ತೆಗೆದುಕೊಳ್ಳ ಬೇಡ, ” ಎಂದರು.
ಅದಕ್ಕೆ ಪ್ರತಿಕ್ರಿಯಿಸಿದ ಇಬ್ರಾಹಿಂ, “ಯಾವಾಗ ಹೇಳಿದ್ರಿ ನೀವು?” ಎಂದು ಮರು ಪ್ರಶ್ನಿಸಿದರು. ‘ಬಾಷಾಗೆ ಹೇಳಿದ್ದೇನೆ.. ಮನೆಗೆ ಬರುತ್ತೇನೆ ಎಂದು ಹೇಳಿದ್ದೇನೆ, ಸುಮ್ಮನಿರು ಎಂದು ಸಿದ್ದರಾಮಯ್ಯ ಹೇಳಿದರು. ಇದಕ್ಕೆ ಮತ್ತೆ ಇಬ್ರಾಹಿಂ ನೀವು ಎಲ್ಲಿ ಹೇಳಿದ್ರಿ ಎಂದು ಮತ್ತೆ ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯ: “ಇರೋ.. ಆತುರ ಮಾಡ್ಬೇಡ, ಸುಮ್ಮನಿರು.. ಹೇಳ್ದಷ್ಟು ಕೇಳು..,” ಎನ್ನುತ್ತ ಮುಂದೆ ನಡೆದರು.
ಇಬ್ರಾಹಿಂ ಅವರು ಮೊನ್ನೆಯಷ್ಟೇ ಕಾಂಗ್ರೆಸ್ ಬಿಡುವ ನಿರ್ಧಾರ ಪ್ರಕಟಿಸಿ, ಕಾಂಗ್ರೆಸ್ ಗೆ ರಾಜೀನಾಮೆ ನೀಡುವುದಾಗಿ ಹೇಳಿದ್ದರು. ಆನಂತರ ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ, ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಜೆಡಿಎಸ್ ಸೇರ್ಪಡೆ ಬಗ್ಗೆ ಚರ್ಚೆ ನಡೆಸಿದ್ದರು.