ಬೆಂಗಳೂರು : ಇತ್ತೀಚಿಗೆ ಅಗಲಿದ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರ “ಕರ್ನಾಟಕ ರತ್ನ” ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮೆಲ್ಲರ ಅಚ್ಚುಮೆಚ್ಚಿನ ಪುನೀತ್ ರಾಜ್ ಕುಮಾರ್ 47ನೇ ಹುಟ್ಟುಹಬ್ಬ ಇಂದು. ಅವರಿಲ್ಲದೆ ನಾವೆಲ್ಲ ದುಃಖದಲ್ಲಿದ್ದೇವೆ. ಅವರ ಬದುಕು ಸ್ಪೂರ್ತಿ. ಅಂಗಾಂಗ ದಾನ ಮಾಡಿರೋದು ನಮ್ಮೆಲ್ಲರಿಗೂ ಪ್ರೇರಣೆ. ಇಂದು ಅವರ ಸಿನಿಮಾ ಜೇಮ್ಸ್ ಕೂಡ ಬಿಡುಗಡೆಯಾಗುತ್ತಿದೆ. ಸಿನಿಮಾ ಯಶಸ್ವಿಯಾಗಲಿ ಎಂದು ಶುಭಾಶಯ ಕೋರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
ಈಗಾಗಲೇ ರಾಜ್ಯ ಸರ್ಕಾರ ಪುನೀತ್ ರಾಜ್‍ಕುಮಾರ್ ಅವರಿಗೆ ಕರ್ನಾಟಕ ರತ್ನ ಘೋಷಣೆ ಮಾಡಿದ್ದೇವೆ. ಸದ್ಯದಲ್ಲೇ ಕುಟುಂಬದ ಜೊತೆಗೆ ಚರ್ಚಿಸಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
‘ಅಪ್ಪು ಜನಸೇವೆ ಬಣ್ಣಿಸಲು ಪದಗಳೇ ಸಾಲದು’
ಎಲ್ಲರ ನೆಚ್ಚಿನ ಅಪ್ಪು, ದೊಡ್ಮನೆ ಹುಡುಗ ಪುನೀತ್ ರಾಜ್ ಕುಮಾರ್ ಅವರ 47ನೇ ಜನ್ಮದಿನ ಇಂದು. ಇದೇ ಮೊದಲ ಬಾರಿಗೆ ರಾಜನಿಲ್ಲದೆ ವಿಶ್ವದೆಲ್ಲೆಡೆ ಹುಟ್ಟುಹಬ್ಬ ಆಚರಿಸಲಾಗುತ್ತಿದೆ. ಇಂದೇ ಪುನೀತ್ ನಟನೆಯ ಕೊನೆಯ ಸಿನಿಮಾ ಜೇಮ್ಸ್ ತೆರೆಗಪ್ಪಳಿಸಿದ್ದು, ಅಭಿಮಾನಿಗಳಲ್ಲಿ ಸಂತಸವನ್ನು ಇಮ್ಮಡಿಗೊಳಿಸಿದೆ”, ಎಂದರು.
ಈ ಕುರಿತು ಟ್ವೀಟ್ ಮಾಡಿರುವ ಅವರು, ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿ, ಪವರ್ ಸ್ಟಾರ್ ಆಗಿ ಕನ್ನಡಿಗರ ಜನಮಾನಸದಲ್ಲಿ ಶಾಶ್ವತ ಸ್ಥಾನ ಪಡೆದಿರುವ ಕರ್ನಾಟಕ ರತ್ನ, ಪ್ರೀತಿಯ ಅಪ್ಪು ದಿ. ಡಾ. ಪುನೀತ್ ರಾಜಕುಮಾರ್ ಅವರ ಜನ್ಮದಿನದಂದು ಪ್ರೀತಿ ಪೂರ್ವಕ ನಮನಗಳು. ಅತಿ ಚಿಕ್ಕ ವಯಸ್ಸಿನಲ್ಲಿ ನೀವು ಮಾಡಿದ ಸಾಧನೆ, ಗಳಿಸಿದ ಜನಪ್ರಿಯತೆ, ಮಾಡಿದ ಜನಸೇವೆಯನ್ನು ಬಣ್ಣಿಸಲು ಪದಗಳೇ ಸಾಲದು ಎಂದು ಹೇಳಿದ್ದಾರೆ.