ಚೆನ್ನೈ : ತರಗತಿಯೊಳಗೆ ಹಿಜಾಬ್ ಧರಿಸಲು ಅನುಮತಿ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್‌ನ ವಿಶೇಷ ಪೀಠದ ನ್ಯಾಯಾಧೀಶರಿಗೆ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನಲ್ಲಿ ಇಬ್ಬರನ್ನು ಬಂಧಿಸಲಾಗಿದೆ.
ಕೋವೈ ರಹಮತುಲ್ಲಾ ಎಂಬಾತನನ್ನು ತಿರುನಲ್ವೇಲಿಯಿಂದ ಬಂಧಿಸಿದರೆ, ಎಸ್. ಜಮಾಲ್ ಮೊಹಮ್ಮದ್ ಉಸ್ಮಾನಿಯನ್ನು ತಂಜಾವೂರ್‌ನಿಂದ ವಶಕ್ಕೆ ತೆಗೆದುಕೊಳ್ಳಲಾಗಿದೆ. ಇಬ್ಬರ ಬಂಧನಗಳೂ ಶನಿವಾರ ರಾತ್ರಿ ನಡೆದಿವೆ. ಆರೋಪಿಗಳು ತಮಿಳುನಾಡು ತೌಹೀದ್ ಜಮಾತ್ (ಟಿಎನ್‌ಟಿಜೆ) ಪದಾಧಿಕಾರಿಗಳು.
ಆರೋಪಿಗಳ ವಿರುದ್ಧ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಹಲವು ದೂರುಗಳ ನಂತರ ಬಂಧಿಸಲಾಗಿದೆ. ಈ ಸಂಬಂಧ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಳೆದ ವಾರ, ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ, ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್ ಮತ್ತು ಜೈಬುನ್ನೆಸಾ ಮೊಹಿಯುದ್ದೀನ್ ಖಾಜಿ ಅವರನ್ನೊಳಗೊಂಡ ವಿಶೇಷ ಪೀಠವು ತರಗತಿಗಳಲ್ಲಿ ಹಿಜಾಬ್‌ಗೆ ಅವಕಾಶ ನೀಡಬೇಕು ಎಂದು ಕೋರಿದ್ದ ಅರ್ಜಿಗಳನ್ನು ವಜಾಗೊಳಿಸುವಾಗ, ಹಿಜಾಬ್ ಧರಿಸುವುದು ಇಸ್ಲಾಂನ ಅವಿಭಾಜ್ಯ ಅಂಗವಲ್ಲ ಎಂದು ಒತ್ತಿ ಹೇಳಿತು.
ತೀರ್ಪಿನ ವಿರುದ್ಧ ಆರೋಪಿ ಕೋವೈ ರಹಮತುಲ್ಲಾ ಕರ್ನಾಟಕದ ನ್ಯಾಯಾಧೀಶರ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸುವ ವಿಡಿಯೋ ವೈರಲ್ ಆಗಿದೆ.
ಕಳೆದ ವರ್ಷ ಜಾರ್ಖಂಡ್‌ನಲ್ಲಿ ಜಿಲ್ಲಾ ನ್ಯಾಯಾಧೀಶರು ಬೆಳಗಿನ ನಡಿಗೆಗೆ ಹೋಗುತ್ತಿದ್ದಾಗ ಅವರನ್ನು ಹತ್ಯೆಗೈದ ಬಗ್ಗೆ ಆರೋಪಿಗಳು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ. “ಕರ್ನಾಟಕದ ಮುಖ್ಯ ನ್ಯಾಯಮೂರ್ತಿಗಳು ಬೆಳಗಿನ ಜಾವ ಎಲ್ಲಿಗೆ ವಾಕಿಂಗ್ ಹೋಗುತ್ತಾರೆ ಎಂಬುದು ಜನರಿಗೆ ತಿಳಿದಿದೆ,” ಎಂದು ಅವರು ಹೇಳಿದ್ದಾರೆ.
ತಮಿಳುನಾಡು ಬಿಜೆಪಿ ಮುಖ್ಯಸ್ಥ ಮತ್ತು ಕರ್ನಾಟಕ ಕೇಡರ್‌ನ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರು ಮದ್ರಾಸ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ನ್ಯಾಯಮೂರ್ತಿ ಎಂ.ಎನ್. ಭಂಡಾರಿ ಅವರಿಗೆ ಈ ಬಗ್ಗೆ ತನಿಖೆಗೆ ಮನವಿ ಮಾಡಿದ್ದರು.
ಕರ್ನಾಟಕದಲ್ಲಿ, ವಕೀಲರಾದ ಸುಧಾ ಕಟ್ವಾ ಅವರ ದೂರಿನ ಆಧಾರದ ಮೇಲೆ ಬೆಂಗಳೂರಿನ ವಿಧಾನಸೌಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ರಾಜ್ಯದಲ್ಲಿ ಕೊಲೆ ಬೆದರಿಕೆ, ಕ್ರಿಮಿನಲ್ ಬೆದರಿಕೆ, ನಿಂದನೀಯ ಭಾಷೆ ಬಳಕೆ ಹಾಗೂ ಶಾಂತಿ ಭಂಗ, ಕೋಮು ಸೌಹಾರ್ದತೆಗೆ ಧಕ್ಕೆ ಉಂಟು ಮಾಡುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬೆಂಗಳೂರಿನ ವಕೀಲರ ಸಂಘ ಕೂಡ ಈ ಬೆಳವಣಿಗೆಯನ್ನು ಖಂಡಿಸಿದೆ. ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.
ಏತನ್ಮಧ್ಯೆ, ಕರ್ನಾಟಕ ಹಿಜಾಬ್ ಪ್ರಕರಣದ ಅರ್ಜಿದಾರರೊಬ್ಬರು ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.