ಬೆಂಗಳೂರು: ಸರ್ಕಾರದ ಆದೇಶದಲ್ಲಿ ಧರ್ಮದ ಭೇದವಿಲ್ಲ ಮತ್ತು ಹಿಜಾಬ್ ಮತ್ತು ಕೇಸರಿ ಶಾಲು ಎರಡನ್ನೂ ಕಾಲೇಜು ಆವರಣದಲ್ಲಿ ಅನುಮತಿಸಲಾಗುವುದಿಲ್ಲ ಎಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಸೋಮವಾರ ಹೇಳಿದರು.
ಉಡುಪಿ ಜಿಲ್ಲೆಯ ಕುಂದಾಪುರದ ಜೂನಿಯರ್ ಕಾಲೇಜುಗಳಲ್ಲಿ ಹಿಜಾಬ್-ಕೇಸರಿ ಶಾಲುಗಳ ವಿವಾದದ ಮುಂದುವರಿದ ಮಧ್ಯೆ ಗೃಹ ಸಚಿವರ ಈ ಹೇಳಿಕೆ ಬಂದಿದೆ.
ಈ ಸಂಸ್ಕೃತಿ ಶಿಕ್ಷಣ ಸಂಸ್ಥೆಗಳಿಂದ ಬರಬೇಕು.ವಿದ್ಯಾರ್ಥಿಗಳು ಧರ್ಮವನ್ನು ಮೀರಿ ಯೋಚಿಸಬೇಕು. ಸಮವಸ್ತ್ರ ಸಮಾನತೆಯ ಸಂಕೇತವಾಗಿದೆ ಎಂದು ರಾಜ್ಯ ಗೃಹ ಸಚಿವರು ಹೇಳಿದರು.
ಪಟ್ಟಭದ್ರ ಹಿತಾಸಕ್ತಿಗಳು ಕೆಲ ವಿದ್ಯಾರ್ಥಿಗಳಿಗೆ ಪ್ರಚೋದನೆ ನೀಡುತ್ತಿವೆ ಎಂದು ಆರೋಪಿಸಿರುವ ಜ್ಞಾನೇಂದ್ರ, ಈ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು. “ಈ ವಿಷಯಗಳ ಹಿಂದೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳಿವೆ ಎಂದು ನಾನು ಶಂಕಿಸುತ್ತೇನೆ (ಉಡುಪಿ ವಿವಾದ). ಇದನ್ನು ಪ್ರಚೋದಿಸುವಲ್ಲಿ ಯಾರು ಭಾಗಿಯಾಗಿದ್ದಾರೆ ಎಂಬುದರ ಕುರಿತು ತನಿಖೆ ಮಾಡಲು ನಾನು ಪೊಲೀಸರಿಗೆ ನಿರ್ದೇಶನ ನೀಡಿದ್ದೇನೆ” ಎಂದು ಹೇಳಿದರು.
ಕಾಲೇಜಿನಲ್ಲಿ ಹಿಜಾಬ್ ಧರಿಸುವುದಕ್ಕೆ ಇರುವ ನಿರ್ಬಂಧವನ್ನು ಪ್ರಶ್ನಿಸಿ ಉಡುಪಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಐವರು ವಿದ್ಯಾರ್ಥಿನಿಯರು ಸಲ್ಲಿಸಿರುವ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಫೆಬ್ರವರಿ 8 ರಂದು ವಿಚಾರಣೆ ನಡೆಸಲಿದೆ. ಹಿಜಾಬ್ ನಿಷೇಧ ಕರ್ನಾಟಕದಲ್ಲಿ ಭಾರೀ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದು, ರಾಜಕೀಯ ಬಣ್ಣವನ್ನೂ ಪಡೆದುಕೊಂಡಿದೆ. ಈ ಮಧ್ಯೆ ರಾಜ್ಯ ಸರ್ಕಾರ ಸಮವಸ್ತ್ರ ಸಂಹಿತೆಯನ್ನು ಜಾರಿಗೊಳಿಸಿ ಆದೇಶ ಹೊರಡಿಸಿದೆ.