No menu items!
Friday, December 6, 2024

ಹಿಜಾಬ್ ವಿವಾದಕ್ಕೆ ಶಾಸಕ ಹಾಲಾಡಿ ಶೆಟ್ಟಿ ಕಾರಣ, ಹೈಕೋರ್ಟ್ ನಲ್ಲಿ ದೂರು ದಾಖಲಿಸಿದ ವಿದ್ಯಾರ್ಥಿನಿಯರು

Must read

ಬೆಂಗಳೂರು: ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳು ಹಿಜಾಬ್‌ ಧರಿಸುವುದಕ್ಕೆ ಸಂಬಂಧಿಸಿದ ವಿವಾದ ತಾರಕ್ಕೇರಿರುವ ನಡುವೆಯೇ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ನಿರ್ದೇಶನದ ಮೇರೆಗೆ ತಮಗೆ ಕಾಲೇಜಿಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಆರೋಪಿಸಿ ಉಡುಪಿ ಜಿಲ್ಲೆಯ ಕುಂದಾಪುರ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ತಮ್ಮ ತಾಯಂದಿರ ಮೂಲಕ ಸೋಮವಾರ ಕರ್ನಾಟಕ ಹೈಕೋರ್ಟ್‌ಗೆ ಮನವಿ ಅರ್ಜಿ ಸಲ್ಲಿಸಿದ್ದಾರೆ.

ತೃತೀಯ ಬಿಬಿಎ ವಿದ್ಯಾರ್ಥಿ ಸುಹಾ ಮೌಲಾನಾ ತಮ್ಮ ತಾಯಿ ಬೀಬಿ ಸಾರಾ ಮತ್ತು ಪ್ರಥಮ ಬಿಬಿಎ ವಿದ್ಯಾರ್ಥಿನಿ ಐಶಾ ಅಲೀಫಾ ಕೌಸರ್‌ ತಮ್ಮ ತಾಯಿ ರಹಮತ್‌ ಅವರ ಮೂಲಕ ಮನವಿ ಸಲ್ಲಿಸಿದ್ದು, ಮಂಗಳೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್‌, ಭಂಡಾರಕರ್ಸ್‌ ಕಲಾ ಮತ್ತು ವಿಜ್ಞಾನ ಕಾಲೇಜಿನ ಪರವಾಗಿ ಪ್ರಾಂಶುಪಾಲರು, ಶಾಸಕ ಶ್ರೀನಿವಾಸ ಶೆಟ್ಟಿ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ ಎಂದು ಬಾರ್‌ ಅಂಡ್‌ ಬೆಂಚ್‌ ವರದಿ ಮಾಡಿದೆ. ಯಾವುದೇ ಷರತ್ತು ಮತ್ತು ನಿರ್ಬಂಧ ವಿಧಿಸದೇ ಅರ್ಜಿದಾರರು ಕಾಲೇಜಿಗೆ ಪ್ರವೇಶ ಮಾಡಲು ಭಂಡಾರಕರ್ಸ್‌ ಕಲಾ ಮತ್ತು ವಿಜ್ಞಾನ ಕಾಲೇಜಿಗೆ ನಿರ್ದೇಶನ ನೀಡಲು ಮಂಗಳೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್‌ಗೆ ನಿರ್ದೇಶಿಸಬೇಕು. ಕಾನೂನಿನ ಯಾವ ನಿಬಂಧನೆಯಡಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಕಾಲೇಜಿನ ಆಡಳಿತದಲ್ಲಿ ಮಧ್ಯಪ್ರವೇಶಿಸಿದ್ದಾರೆ ಎನ್ನುವುದಲ್ಲದೆ ತಮ್ಮ ರಾಜಕೀಯ ಅಜೆಂಡಾವನ್ನು ಪ್ರಚಾರ ಮಾಡುತ್ತಿದ್ದಾರೆ ಎಂಬುದನ್ನು ಪ್ರಶ್ನಿಸಿ ಆದೇಶಿಸಬೇಕು. ಪ್ರಕರಣಕ್ಕೆ ಸಂಬಂಧಿಸಿದ ವಾಸ್ತವಾಂಶಗಳು ಹಾಗೂ ಸನ್ನಿವೇಶದ ಹಿನ್ನೆಲೆಯಲ್ಲಿ ನ್ಯಾಯದಾನ ಹಾಗೂ ಅಂತಃಸಾಕ್ಷಿಯನ್ನು ಎತ್ತಿಹಿಡಿಯುವ ಯಾವುದೇ ಪರಿಹಾರವನ್ನು ನೀಡುವಂತೆ ಕೋರಲಾಗಿದೆ ಎಂದು ವರದಿ ಹೇಳಿದೆ.

ಅಲ್ಲದೆ ಮಧ್ಯಂತರ ಪರಿಹಾರವಾಗಿ, ಅರ್ಜಿದಾರರಿಗೆ ಯಾವುದೇ ಪಕ್ಷಪಾತ, ತಾರತಮ್ಯ ತೋರದೆ ಶಿರವಸ್ತ್ರ ಧರಿಸಿ ತರಗತಿಗಳಿಗೆ ಪ್ರವೇಶಿಸಲು ಭಂಡಾರಕರ್ಸ್‌ ಕಾಲೇಜಿಗೆ ಮಂಗಳೂರು ವಿವಿಯ ರಿಜಿಸ್ಟ್ರಾರ್‌ ಅವರು ಸೂಚಿಸುವಂತೆ ನ್ಯಾಯಾಲಯವು ನಿರ್ದೇಶಿಸಬೇಕು. ನ್ಯಾಯ ಮತ್ತು ಸಮಾನತೆಯ ದ್ಯೋತಕವಾಗಿ ಶೈಕ್ಷಣಿಕ ಸಿಬ್ಬಂದಿಯ ತಾರತಮ್ಯದಿಂದಾಗಿ ಅರ್ಜಿದಾರರು ಈ ಶೈಕ್ಷಣಿಕ ವರ್ಷದಲ್ಲಿ ತರಗತಿಯಿಂದ ಹೊರಗುಳಿದಿರುವ ದಿನಗಳಿಗೆ ಅಥವಾ ಮನವಿ ಇತ್ಯರ್ಥವಾಗುವವರೆಗೆ ಹಾಜರಾತಿ ನೀಡಬೇಕು ಎಂದು ಕೋರಲಾಗಿದೆ.

ಕಾಲೇಜಿಗೆ ಪ್ರವೇಶ ಪಡೆದಾಗಿನಿಂದಲೂ ಯಾವುದೇ ವಿವಾದ ಇರಲಿಲ್ಲ. ಫೆಬ್ರವರಿ 3ರಂದು ಏಕಾಏಕಿ ಪ್ರಾಂಶುಪಾಲರು ಮತ್ತು ಸಿಬ್ಬಂದಿಯು ಹಿಬಾಜ್‌ ಧರಿಸಿ ಕಾಲೇಜಿಗೆ ಪ್ರವೇಶ ಮಾಡಲಾಗದು. ಈ ಸಂಬಂಧ ಸರ್ಕಾರ ಆದೇಶವಿದೆ ಎಂದು ನಮಗೆ ಕಾಲೇಜಿಗೆ ಪ್ರವೇಶಿಸಲು ನಿರ್ಬಂಧ ವಿಧಿಸಿದ್ದಾರೆ.
ಪ್ರಾಂಶುಪಾಲರು ಮತ್ತು ಸಿಬ್ಬಂದಿಯನ್ನು ವಿದ್ಯಾರ್ಥಿಗಳ ಪೋಷಕರು ಭೇಟಿ ಮಾಡಿ ಪ್ರಶ್ನಿಸಿದಾಗ ಶಾಸಕ ಶ್ರೀನಿವಾಸ ಶೆಟ್ಟಿ ಅವರ ನಿರ್ದೇಶನದ ಮೇರೆಗೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಪ್ರಾಂಶುಪಾಲರು ಹೇಳಿದ್ದಾಗಿ ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ವಿಶ್ವವಿದ್ಯಾಲಯ ಧನಸಹಾಯ ಆಯೋಗ ಅಥವಾ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಕಾಯಿದೆ ಅಡಿ ಕಾಲೇಜಿನ ವಿದ್ಯಾರ್ಥಿಗಳ ಸಮವಸ್ತ್ರಕ್ಕೆ ಸಂಬಂಧಿಸಿದಂತೆ ಯಾವುದೇ ನಿಯಮಗಳನ್ನು ಮಾಡಲಾಗಿಲ್ಲ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಈಗಾಗಲೇ ವಿದ್ಯಾರ್ಥಿನಿಯೊಬ್ಬರು ಹೈಕೋರ್ಟಿಗೆ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದು, ಇನ್ನೊಂದು ಅರ್ಜಿಯನ್ನು ಉಡುಪಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಐವರು ವಿದ್ಯಾರ್ಥಿನಿಯರು ಸಲ್ಲಿಸಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article

error: Content is protected !!