ಮಡಿಕೇರಿ: ಶಾಲಾ ಕಾಲೇಜುಗಳ ಮಕ್ಕಳಿಗೆ ಕೇಸರಿ ಶಲ್ಯ ವಿತರಿಸುತ್ತಿರುವ ವೀಡಿಯೋ ವೈರಲ್ ಆಗಿದೆ. ಜೊತೆಗೆ ವಿದ್ಯಾರ್ಥಿಗಳಿಗೆ ಕೋಮು ಪ್ರಚೋದನೆಯನ್ನು ಮಾಡಿರುವುದೂ ವಿಡಿಯೊದಲ್ಲಿ ದಾಖಲಾಗಿದೆ.
ಸಿದ್ದಾಪುರ ಸಮೀಪದ ಅಭ್ಯತ್ ಮಂಗಲದಲ್ಲಿ ಬಜರಂಗದಳ ಮತ್ತು ದುರ್ಗಾವಾಹಿನಿಯ ಮುಖಂಡರು ಸೇರಿ ಕೇಸರಿ ಶಲ್ಯ ವಿತರಿಸಿದ್ದಾರೆ ಎಂದು ತಿಳಿದುಬಂದಿದೆ.
“ಸದ್ಯಕ್ಕೆ ಯೂನಿಫಾರ್ಮ್ ಫೋಲೋ ಮಾಡಿ, ಏನೂ ಮಾಡಬೇಡಿ… ಮಧ್ಯಂತರ ಆದೇಶ ಇದೆ. ಶಲ್ಯವನ್ನು ಬ್ಯಾಗೊಳಗೆ ಇಡ್ಕೊಳಿ… ಬ್ಯಾಗೊಳಗೂ ಬೇಡ… ಮನೆಯಲ್ಲಿ ಇಡ್ಕೊಳಿ” ಎಂದು ದುರ್ಗಾವಾಹಿನಿಯ ಮಹಿಳಾ ಪ್ರತಿನಿಧಿಯೊಬ್ಬರು ಹೇಳಿದ್ದಾರೆ.
ವಿದ್ಯಾರ್ಥಿ ಸಮುದಾಯದಲ್ಲಿ ಕೋಮು ವೈರತ್ವವನ್ನು ಪ್ರಚೋದಿಸಿರುವ ಬಜರಂಗದಳ ಹಾಗೂ ದುರ್ಗಾವಾಹಿನಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಹಿಜಾಬ್ ಧರಿಸಿ ಬರುತ್ತಿದ್ದ ವಿದ್ಯಾರ್ಥಿನಿಯರನ್ನು ಹೊರಗಡೆ ನಿಲ್ಲಿಸಿದ ಬಳಿಕ ವಿವಾದ ಮುನ್ನೆಲೆಗೆ ಬಂದಿತ್ತು. ಹಿಜಾಬ್ ಮೊದಲಿನಿಂದಲೂ ಧರಿಸಲಾಗುತ್ತಿತ್ತು. ಆದರೆ ಕೇಸರಿ ಶಾಲನ್ನು ಹಿಜಾಬ್ ವಿರೋಧಿಯಾಗಿ ಬಳಸಿ ಕಾಲೇಜುಗಳಿಗೆ ಬರಲು ವಿದ್ಯಾರ್ಥಿಗಳು ಆರಂಭಿಸಿದರು. ಇದರ ಹಿಂದೆ ಕೇಸರಿ ಸಂಘಟನೆಗಳ ಪ್ರಚೋದನೆ ಇತ್ತೆಂಬುದಕ್ಕೆ ಈಗಾಗಲೇ ಹಲವು ವರದಿಗಳು ಸಾಕ್ಷಿಯಾಗಿವೆ.
ಉಡುಪಿಯ ಎಂಜಿಎಂ ಕಾಲೇಜಿನ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬರಲು ಹಿಂದೂ ಜಾಗರಣ ವೇದಿಕೆ ಹಾಗೂ ಬಿಜೆಪಿ ಪ್ರಚೋದಿಸಿದ್ದವು. ಕೇಸರಿ ಶಾಲು ಹಾಗೂ ಕೇಸರಿ ಪೇಟವನ್ನು ಹಿಂಜಾವೇ ವಿತರಿಸಿತ್ತು ಎಂಬುದನ್ನು ಇಂಗ್ಲಿಷ್ ಜಾಲತಾಣವೊಂದು ವರದಿ ಮಾಡಿತ್ತು.
ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಹೋಗುವಂತೆ ಬಿಜೆಪಿ ಬೆಂಬಲಿತ ಹಿಂದುತ್ವ ಮುಖಂಡರು ಪ್ರಚೋದನೆ ಮಾಡುತ್ತಿರುವ ವಿಡಿಯೊ ವೈರಲ್ ಆಗಿತ್ತು.