ಬೆಳಗಾವಿ : “ಅಮೇರಿಕೆ ವಿಶ್ವದ ಶ್ರೀಮಂತ ದೇಶ, ಅದಕ್ಕೆ ಅಲ್ಲಿನ ರಸ್ತೆಗಳೇ ಕಾರಣ. 2024 ದವರೆಗೆ ಭಾರತ ಅಮೇರಿಕಾ ದೇಶದಲ್ಲಿರುವ ರಸ್ತೆಗಳನ್ನು ತನ್ನ ಪ್ರಮುಖ ನಗರಗಳಲ್ಲಿ ಹೊಂದಲಿದೆ,” ಎಂಬ ಆಶ್ವಾಸನೆಯನ್ನು ರಾಷ್ಟೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ನೀಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯ ಐದು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರು, ಭಾರತದ ರಸ್ತೆ ಜಾಲವನ್ನು 2024 ರ ವೇಳೆಗೆ ಅಮೆರಿಕಕ್ಕೆ ಸರಿಸಮನಾಗಿ ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದ್ದೇನೆ. ಪ್ರತಿಯೊಂದು ಅಭಿವೃದ್ಧಿಯು ರಸ್ತೆ ಸಂಪರ್ಕವನ್ನು ಅವಲಂಬಿಸಿದೆ. ಆದ್ದರಿಂದ ರಸ್ತೆ ಸಂಪರ್ಕ ಜಾಲವನ್ನು ಸದೃಢಗೊಳಿಸಲು ಸರಕಾರ ಬದ್ಧವಿದೆ ಎಂದು ಹೇಳಿದರು.
ಭಾರತ ಮಾಲಾ-2 ಯೋಜನೆಯಲ್ಲಿ ಈ ಭಾಗದ ಇನ್ನಷ್ಟು ಯೋಜನೆಗಳನ್ನು ಸೇರ್ಪಡೆ ಮಾಡಲಾಗುವುದು ಎಂದು ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದರು.
ಹೊಸ ಮೇಲ್ಸೆತುವೆ ಪ್ರಸ್ತಾವವನ್ನು ಅಭಯ್ ಪಾಟೀಲ ನೀಡಿದ್ದರು. ಆದರೆ ಸ್ಥಳೀಯ ಕಾರಣಗಳಿಂದ ಅದು ಸಾಧ್ಯವಾಗಿರುವುದಿಲ್ಲ. ಸ್ಥಳೀಯವಾಗಿ ಅಗತ್ಯ ಸಹಕಾರ ನೀಡಿದರೆ ಮುಂದುವರಿಸಲಾಗುವುದು ಎಂದರು.
ಈ ಭಾಗದ ಸಂಸದರು, ಶಾಸಕರು ವಿವಿಧ ರಸ್ತೆಗಳ ಅಭಿವೃದ್ಧಿ ಮಾಡಲು ಹಾಗೂ ಮೇಲ್ದರ್ಜೆಗೇರಿಸಲು ಮನವಿ ಸಲ್ಲಿಸಿದ್ದು, ಈ ಎಲ್ಲ ಪ್ರಸ್ತಾವನೆಗಳಿಗೆ ತಕ್ಷಣವೇ ಮಂಜೂರಾತಿ ನೀಡಲಾಗುವುದು.
9 ಸಾವಿರ ಕಿ.ಮೀ. ಉದ್ದದ ಗ್ರೀನಫೀಲ್ಡ್ ಹಾಗೂ ಹೆದ್ದಾರಿ ಕಾರಿಡಾರ್ ಯೋಜನೆಯನ್ನು 3 ಲಕ್ಷ ಕೋಟಿಗೂ ಅಧಿಕ ವೆಚ್ಚದಲ್ಲಿ ಜಾರಿಗೊಳಿಸಲಾಗುತ್ತಿದೆ. ಇದರಲ್ಲಿ ಬೆಂಗಳೂರು-ಚೆನೈ ಯೋಜನೆ ಕೂಡ ಒಳಗೊಂಡಿದೆ.
ದೆಹಲಿ-ಮುಂಬೈ ಹೆದ್ದಾರಿ ಯಲ್ಲಿ 120 ಕಿ.ಮೀ.ವೇಗದಲ್ಲಿ ವಾಹನ ಚಲಾಯಿಸಬಹುದು ಇದರಿಂದ ಎರಡು ನಗರಗಳ ನಡುವಿನ ಪ್ರಯಾಣ ಅವಧಿ 12 ಗಂಟೆಯಾಗಲಿದೆ.
ಬೆಂಗಳೂರು ಟ್ರಾಫಿಕ್ ಹಾಗೂ ನಗರೀಕರಣ ಒತ್ತಡವನ್ನು ನಿಯಂತ್ರಿಸುವ ದೃಷ್ಟಿಯಿಂದ ಹೆದ್ದಾರಿಗಳ ಪಕ್ಕದಲ್ಲಿ ಭೂಸ್ವಾಧೀನ ಮಾಡಿಕೊಂಡು ಸ್ಮಾರ್ಟ್ ವಿಲೇಜ್ ಹಾಗೂ ಕೈಗಾರಿಕೆ ಸ್ಥಾಪಿಸುವ ಮೂಲಕ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಬಹುದು. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಯೋಜನೆ ರೂಪಿಸಿದರೆ ಕೇಂದ್ರ ಸರಕಾರದ ವತಿಯಿಂದ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ತಿಳಿಸಿದರು.
ರಾಜ್ಯ ಸರಕಾರವು ಅಗತ್ಯ ರಸ್ತೆ ಯೋಜನೆಗಳಿಗೆ ಭೂಸ್ವಾಧೀನವನ್ನು ಮಾಡಿಕೊಟ್ಟರೆ ರಾಜ್ಯದಲ್ಲಿ ಪ್ರವಾಸೋದ್ಯಮ ಹಾಗೂ ಕೈಗಾರಿಕೆಗಳ ಅಭಿವೃದ್ಧಿಗೆ ಪೂರಕವಾದ ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ ನೀಡಲಾಗುವುದು ಎಂದು ಸಚಿವ ನಿತಿನ್ ಗಡ್ಕರಿ ತಿಳಿಸಿದರು.
ಭಾರತ ಮಾಲಾ-2 ಯೋಜನೆಯಲ್ಲಿರುವ ಪುಣೆ-ಬೆಂಗಳೂರು ರಸ್ತೆಯ ಈಗಿನ ಅಂತರವನ್ನು 100 ಕಿ.ಮೀ. ಕಡಿಮೆಗೊಳಿಸುವ ಯೋಜನೆ ರೂಪಿಸಲಾಗಿದೆ. ಮುಂದೆ ಇದು ಬೆಂಗಳೂರು-ಚೆನೈ ಹೆದ್ದಾರಿಗೆ ಸಂಪರ್ಕ ಕಲ್ಪಿಸಲಿದೆ ಎಂದು ವಿವರಿಸಿದರು.