ದೆಹಲಿ : ಖಾಸಗಿ ಟೆಲಿಕಾಂ ಕಂಪನಿಗಳು ದೇಶದಲ್ಲಿ ಮೊಬೈಲ್ ಫೋನ್ 5ಜಿ ಸೇವೆ ನೀಡಲು ಅಣಿಯಾಗಿರುವ ಈ ಹಂತದಲ್ಲಿ ಕೇಂದ್ರ ಸರ್ಕಾರ ಸ್ವಾಮ್ಯದ “ಬಿಎಸ್ಎನ್ಎಲ್” ಸ್ವಾತಂತ್ರೋತ್ಸವ ದಿನವಾದ ಆಗಸ್ಟ್ 15 ರಿಂದ 3G ಯಿಂದ 4ಜಿ ಸೇವೆಗೆ ಶಿಫ್ಟ್ ಆಗಲಿದೆ.
ಬಿಎಸ್ಏನ್ಎಲ್ ನ 4ಜಿ ಸೇವೆ ಹಲವು ವಿಶೇಷಗಳನ್ನು ಹೊಂದಿದೆ. ಈ ಸೇವೆಗೆ ಟಾಟಾ ಕನ್ಸಲ್ಟನ್ಸಿ ಸರ್ವೀಸ್ (ಟಿಸಿಎಸ್) ಟೆಕ್ನಾಲಜಿ ಪಾರ್ಟ್ನರ್ ಆಗಿರಲಿದೆ. ಇದೇ ಮೊದಲ ಬಾರಿಗೆ 4ಜಿ ಸೇವೆಗೆ ಪೂರ್ಣಪ್ರಮಾಣದ ಭಾರತೀಯ ತಂತ್ರಜ್ಞಾನ ಬಳಕೆಯಾಗಲಿದೆ. ಅಲ್ಲದೆ ದೂರಸಂಪರ್ಕ ಉಪಕರಣಗಳ ಉತ್ಪಾದನೆ ಉದ್ಯಮಕ್ಕೆ ಟಿಸಿಎಸ್ ಪದಾರ್ಪಣೆ ಮಾಡಲಿದೆ. ಈ ಕುರಿತು ಬಿಎಸ್ಎನ್ಎಲ್ ನಿರ್ದೇಶಕ ಸುನೀಲ್ ಕುಮಾರ ಮಿಶ್ರಾ ಮಾಹಿತಿ ನೀಡಿದ್ದಾರೆ.
ದೆಹಲಿ, ಮುಂಬೈಗಳಲ್ಲಿ ಮೊದಲು 4ಜಿ ಸೇವೆ ಆರಂಭವಾಗಲಿದೆ. ದೇಶಾದ್ಯಂತ 1 ಲಕ್ಷ ಹೆಚ್ಚುವರಿ ಟಾವರ್ ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ಅವರು ಹೇಳಿದ್ದಾರೆ. ಆಧುನಿಕ ತಂತ್ರಜ್ಞಾನ ಹೊಂದಿದ ಕಡಿಮೆ ವೆಚ್ಚದ, ಹೆಚ್ಚು ಪ್ರಬಲವಾಗಿರುವ ಟವರ್ ನಿರ್ಮಿಸಲಾಗುವುದು. ಡಿಸೆಂಬರ್ ತಿಂಗಳಲ್ಲಿ ಬಿಎಸ್ಎನ್ಎಲ್ 11 ಲಕ್ಷ ಹೆಚ್ಚುವರಿ ಗ್ರಾಹಕರನ್ನು ಗಳಿಸಿದೆ ಎಂದು ಹೇಳಿದ್ದಾರೆ.
ಖಾಸಗಿ ಟೆಲಿಕಾಂ ಕಂಪನಿಗಳು ದೇಶದಲ್ಲಿ 5ಜಿ ಸೇವೆ ನೀಡಲು ಅಣಿಯಾಗಿ ನಿಂತಿವೆ. ಈ ಹಂತದಲ್ಲಿ ಕೇಂದ್ರ ಸರ್ಕಾರ ಸ್ವಾಮ್ಯದ ಬಿಎಸ್ಎನ್ಎಲ್ 4ಜಿ ಸೇವೆ ನೀಡುವ ಹಂತದಲ್ಲಿದೆ. ಖಾಸಗಿ ಕಂಪನಿಗಳ ಜತೆ ಪೈಪೋಟಿ ನಡೆಸುವುದು ಕಷ್ಟಕರವಾಗಿದೆ. ಆದರೂ ತನ್ನ ಅತ್ಯುತ್ತಮ ಯೋಜನೆ, ಕಡಿಮೆ ದರದಿಂದ ಗ್ರಾಹಕರನ್ನು ಉಳಿಸಿಕೊಂಡಿದೆ. ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ಸೇವೆ ನೀಡುವ ಮೂಲಕ ಗ್ರಾಹಕರಿಗೆ ಆಪ್ತವಾಗಿದೆ.