ಮಂಗಳೂರು : ಮಂಗಳೂರು ಏರ್‌ಪೋರ್ಟ್‌ನಲ್ಲಿ ಬಾಂಬ್ ಇಟ್ಟ ಪ್ರಕರಣ ಎರಡು ವರ್ಷಗಳ ವಿಚಾರಣೆ ನಡೆಸಿದ ಮಂಗಳೂರಿನ ನಾಲ್ಕನೇ ಜಿಲ್ಲಾ ನ್ಯಾಯಾಲಯದಿಂದ ತೀರ್ಪು ನೀಡಿದ್ದು ಆದಿತ್ಯರಾವ್‌ಗೆ 25 ವರುಷ ಜೈಲು ಶಿಕ್ಷೆ ಹಾಗು 20,000 ರೂಪಾಯಿ ದಂಡ ವಿಧಿಸಿದೆ.
2020ರ ಜನವರಿ 20ರಂದು ಮಂಗಳೂರು ಏರ್‌ಪೋರ್ಟ್‌ಗೆ ಬಾಂಬ್ ಇಟ್ಟಿದ್ದ ಆದಿತ್ಯರಾವ್ ಜನವರಿ 22ರಂದು ಬೆಂಗಳೂರಿನಲ್ಲಿ ಪೊಲೀಸ್ ಠಾಣೆಯೊಂದರಲ್ಲಿ ಶರಣಾಗಿದ್ದ. ಆಗ ಗೃಹ ಸಚಿವರಾಗಿದ್ದ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬಾಂಬ್ ಇಟ್ಟಿದ್ದ ವ್ಯಕ್ತಿಯ ಮಾಹಿತಿ ಸಿಕ್ಕ ನಂತರ “ಆತ ಮಾನಸಿಕ ಅಸ್ವಸ್ಥ” ಎಂದು ಹೇಳಿಕೆ ನೀಡಿದ್ದರು.
ಉಡುಪಿ ಜಿಲ್ಲೆಯ ಮಣಿಪಾಲ ಮೂಲದ ಆದಿತ್ಯರಾವ್ ಮೆಕ್ಯಾನಿಕಲ್ ಎಂಜಿನಿಯರ್ ಪದವೀಧರನಾಗಿದ್ದು, 2018ರಲ್ಲಿ ಬೆಂಗಳೂರು ಏರ್‌ಪೋರ್ಟ್ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದ. ಆದರೆ ಸೂಕ್ತ ದಾಖಲೆಗಳು ಇಲ್ಲದ ಕಾರಣ ಅರ್ಜಿ ತಿರಸ್ಕೃತಗೊಂಡಿತ್ತು. ತನ್ನ ಅರ್ಜಿ ತಿರಸ್ಕೃತವಾಗಿದ್ದಕ್ಕೆ ಆದಿತ್ಯರಾವ್‌ಗೆ ಆಕ್ರೋಶವಿತ್ತು. ಹೀಗಾಗಿ ಅನೇಕ ಬಾರಿ ಏರ್‌ಪೋರ್ಟ್‌ಗೆ ಹುಸಿ ಬಾಂಬ್ ಕರೆ ಮಾಡಿದ್ದ.
2020ರ ಜನವರಿಯಲ್ಲಿ ಹಲವು ಪ್ರಯೋಗಗಳನ್ನು ನಡೆಸಿ ಬಳಿಕ ಮಂಗಳೂರು ಏರ್‌ಪೋರ್ಟ್‌ಗೆ ಬಾಂಬ್ ಇಟ್ಟಿದ್ದ. ದೇಶಾದ್ಯಂತ ಭಾರೀ ಸುದ್ದಿಯಾಗಿದ್ದ ಮಂಗಳೂರು ಏರ್‌ಪೋರ್ಟ್ ಬಾಂಬ್ ಕೇಸ್ ಇದಾಗಿದ್ದು, ಸಜೀವ ಬಾಂಬ್ ಅನ್ನು ಬಾಂಬ್ ನಿಷ್ಕ್ರಿಯ ದಳ ಏರ್‌ಪೋರ್ಟ್ ಕೆಳಭಾಗದ ವಿಶಾಲವಾದ ಗದ್ದೆಯಲ್ಲಿ ಬಾಂಬ್ ನಿಷ್ಕ್ರಿಯಗೊಳಿಸಿತ್ತು.
ಆದಿತ್ಯರಾವ್ ತಂದೆ ನಿವೃತ್ತ ಬ್ಯಾಂಕ್ ಉದ್ಯೋಗಿಯಾಗಿದ್ದು, ಉರ್ವದ ಚಿಲಿಂಬಿಯಲ್ಲಿರುವ ಅಪಾರ್ಟ್‌ಮೆಂರ್ಟ್‌ನಲ್ಲಿ ವಾಸವಿದ್ದರು. ಆದಿತ್ಯರಾವ್ ತಾನು ಕಲಿತ ವಿದ್ಯಾಭ್ಯಾಸಕ್ಕೆ ಸರಿಯಾಗಿ ಉದ್ಯೋಗ ಸಿಕ್ಕಿಲ್ಲ ಅಂತಾ ಹಲವು ಕೆಲಸಗಳನ್ನು ಬದಲಿಸುತ್ತಿದ್ದ.
ಬಾಂಬ್ ಇಡುವ ಮುನ್ನ ಆದಿತ್ಯರಾವ್, ಮಂಗಳೂರಿನ ಬಲ್ಮಠದಲ್ಲಿರುವ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ಬಿಲ್ಲಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಬಳಿಕ ಕಾರ್ಕಳದ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲೂ ಕೆಲಸ ಮಾಡುತ್ತಿದ್ದ. ಕೆಲಸ ಬಿಟ್ಟು ರಾತ್ರಿ ಇಂಟರ್ನೆಟ್ ಸಹಾಯದಿಂದ ಬಾಂಬ್ ತಯಾರಿಸುವುದು ಹೇಗೆ ಅಂತಾ ಪೂರ್ವತಯಾರಿ ಮಾಡುತ್ತಿದ್ದ.
ಹೀಗೆ ಅಂತರ್ಜಾಲದ ಮೂಲಕ ಬಾಂಬ್ ತಯಾರಿಸಿದ ಆದಿತ್ಯರಾವ್, 2020ರ ಜನವರಿ 19 ರಂದು ಮಂಗಳೂರು ಏರ್‌ಪೋರ್ಟ್‌ನ ಪ್ರವೇಶ ದ್ವಾರದ ಬಳಿ ಬಾಂಬ್ ಇದ್ದ ಬ್ಯಾಗನ್ನಿರಿಸಿ ಪರಾರಿಯಾಗಿದ್ದ. ವಿಮಾನ ನಿಲ್ದಾಣದಲ್ಲಿ ಶ್ವಾನ ತಪಾಸಣೆ ವೇಳೆ ಬಾಂಬ್ ಇದ್ದ ಬ್ಯಾಗ್ ಪತ್ತೆಯಾಗಿದ್ದು, ಬಳಿಕ ಬಾಂಬ್ ನಿಷ್ಕ್ರಿಯ ವಾಹನದ ಮೂಲಕ ಕೆಂಜಾರಿನ ವಿಶಾಲವಾದ ಗದ್ದೆಯಲ್ಲಿ ಬಾಂಬ್ ನಿಷ್ಕ್ರಿಯಗೊಳಿಸಲಾಗಿತ್ತು.