ಬೆಳಗಾವಿ : ಬೆಳಗಾವಿಯಲ್ಲಿ ಸರ್ಕಾರಿ ಎಪಿಎಂಸಿಗೆ ಪರ್ಯಾಯವಾಗಿ ಪ್ರಾರಂಭವಾಗಿರುವ ಖಾಸಗಿ ಎಪಿಎಂಸಿಯಿಂದ ಆಗಲಿರುವ ದುಷ್ಪರಿಣಾಮಗಳ ಕುರಿತು ಪರಿಶೀಲನೆ ಮಾಡಲು ರಾಜ್ಯ ಎಪಿಎಂಸಿ ಇಲಾಖೆ ನಿರ್ದೇಶಕ ಎ ಎಂ ಯೋಗೇಶ್ ಇಂದು ಸರಕಾರಿ ಎಪಿಎಂಸಿಗೆ ಭೆಟ್ಟಿ ನೀಡಿದರು.
ಸರಕಾರದ ಎಪಿಎಂಸಿ ಉಳಿಸಲು ತಾವು ಬಧರಿದ್ದು ಅದಕ್ಕಾಗಿ ಏನು ಮಾಡಬೇಕೆಂದು ಅಧಿಕಾರಿಗಳೊಂದಿಗೆ ಚರ್ಚಿಸುವದಾಗಿ ಹೇಳಿದರು. ಖಾಸಗಿ ಎಪಿಎಂಸಿ ರದ್ದು ಪಡಿಸಬೇಕೆಂದು ಪ್ರತಿಭಟನೆ ನಡೆದಿದೆ. ಅಧಿಕಾರಿಗಳ ಜೊತೆಗೆ ಚರ್ಚಿಸಿ ಮುಖ್ಯ ಕಚೇರಿಯಲ್ಲಿ ಏನು ಕ್ರಮ ತೆಗೆದುಕೊಳ್ಳಬೇಕು ತೆಗೆದುಕೊಳ್ಳುತ್ತೇವೆ ಎಂದು ಯೋಗೇಶ್ ಭರವಸೆ ತಿಳಿಸಿದರು.
ಬೆಳಗಾವಿಯಲ್ಲಿ ಖಾಸಗಿ ಎಪಿಎಂಸಿ ರದ್ದು ಮಾಡುವಂತೆ ಆಗ್ರಹಿಸಿ ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಸಿದಗೌಡ ಮೊದಗಿ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ 45ನೇ ದಿನಕ್ಕೆ ಕಾಲಿಟ್ಟಿದೆ. ರವಿವಾರ ಪ್ರತಿಭಟನಾ ಸ್ಥಳಕ್ಕೆ ಯೋಗೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು ತಾವು ಅಧಿಕಾರ ವಹಿಸಿಕೊಂಡು ನಾಳೆ ಸೋಮವಾರಕ್ಕೆ ಒಂದು ತಿಂಗಳಾಗಲಿದೆ. ಬೆಳಗಾವಿಯ ಒಂದು ನಿಯೋಗ ಬಂದು ತಮ್ಮ ಜೊತೆಗ ಒಂದು ಗಂಟೆ ಸಭೆ ಮಾಡಿದ್ದರು. ಇದೀಗ ಸ್ಥಳಕ್ಕೆ ಬಂದಿದ್ದು. ಪರಿಶೀಲನೆ ನಡೆಸುತ್ತಿದ್ದೇನೆ, ಏನೇನು ಆಗಿದೆ ಎಂಬುದರ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತೇನೆ. ಈ ಎಪಿಎಂಸಿ ಉಳಿಸಲು ಕಾನೂನು ಬದ್ಧವಾಗಿ ಏನೆಲ್ಲಾ ಕ್ರಮ ಕೈಗೊಳ್ಳಬೇಕು ಕೈಗೊಳ್ಳುತ್ತೇವೆ ಎಂದರು.
ಸರಕಾರದ ಮೇಲೆ ರೈತರು, ವ್ಯಾಪಾರಿಗಳಿಗೆ ವಿಶ್ವಾಸವಿದೆ. ಇದು ಒಬ್ಬರ ಹಂತದಲ್ಲಿ ತೀರ್ಮಾನ ಆಗುವಂತಹದಲ್ಲ. ಸಚಿವರ ಗಮನಕ್ಕೆ ತಂದು, ಏನೆಲ್ಲಾ ತಪ್ಪುಗಳಾಗಿವೆ, ಅವುಗಳನ್ನು ಹೇಗೆ ಸರಿಪಡಿಸಬೇಕು ಸರಿಪಡಿಸುತ್ತೇವೆ. ಇನ್ನು ಮುಂದಿನ ದಿನಗಳಲ್ಲಿ ಬೆಳಗಾವಿ ಎಪಿಎಂಸಿಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಅಧಿಕಾರಿಗಳ ಜೊತೆಗೆ ಚರ್ಚಿಸುತ್ತೇನೆ ಎಂದರು.