ವಿಜಯಪುರ : ಕರಾವಳಿ ಜಿಲ್ಲೆಗಳಿಗೆ ಮೀಸಲಾಗಿದ್ದ ಹಿಜಾಬ್, ಕೇಸರಿ ಶಾಲು ವಿವಾದ ಈಗ ರಾಜ್ಯದಲ್ಲೆಡೆ ವ್ಯಾಪಿಸುತ್ತಿದೆ. ಸೋಮವಾರ ಇದರ ಬಿಸಿ ಬಸವನಾಡಿಗೂ ಹೊಡೆದಿದ್ದು ಹಿಜಾಬ್ ಗೆ ಪ್ರತಿಯಾಗಿ ಕೇಸರಿ ಶಾಲು ಧರಿಸಿ ವಿದ್ಯಾರ್ಥಿಗಳು ಕಾಲೇಜಿಗೆ ಬಂದಿದ್ದರಿಂದ ಎರಡು ಕಾಲೇಜ್ ಗಳಿಗೆ ರಜೆ ಘೋಷಿಸಲಾಗಿದೆ.
ಎರಡು ಕಾಲೇಜಿನ ನೂರಾರು ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಆಗಮಿಸಿದ್ದಾರೆ. ಅಲ್ಲದೇ ಕಾಲೇಜು ಎದುರಿನಲ್ಲಿ ಜೈ ಶ್ರೀರಾಮ ಘೋಷಣೆ ಮೊಳಗಿವೆ.
ವಿಜಯಪುರ ಜಿಲ್ಲೆ ಇಂಡಿ ಪಟ್ಟಣದ ಶಾಂತೇಶ್ವರ ಪಿಯುಸಿ ಕಾಲೇಜು ಹಾಗೂ ಗು.ರಾ. ಗಾಂಧಿ ಕಲಾ, ವಾಯ್, ಎ. ಪಾಟೀಲ್ ವಾಣಿಜ್ಯ ಹಾಗೂ ಮಾ ಫು ದೋಶಿ ವಿಜ್ಞಾನ ಪದವಿ ಮಹಾ ವಿದ್ಯಾಲಯದ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಆಗಮಿಸಿದ್ದರು.
ಇಂಡಿ ಪಟ್ಟಣದಲ್ಲಿರೋ ಎರಡು ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡೇ ತರಗತಿಗಳಿಗೆ ಆಗಮಿಸಿದ್ದ ಹಿನ್ನೆಲೆಯಲ್ಲಿ ಕಾಲೇಜಿನ ಆಡಳಿತ ಮಂಡಳಿ ಇಡೀ ಕಾಲೇಜಿಗೆ ರಜೆ ಘೋಷಿಸಿದೆ.
ಶಾಂತೇಶ್ವರ ಪಿಯುಸಿ ಕಾಲೇಜು ಹಾಗೂ ಜಿ ಆರ್ ಬಿ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಆಗಮಿಸಿದ್ದರ ಹಿನ್ನೆಲೆಯಲ್ಲಿ ಎರಡೂ ಕಾಲೇಜುಗಳಿಗೆ ಆಡಳಿತ ಮಂಡಳಿ ತುರ್ತು ಸಭೆ ನಡೆಸಿ ರಜೆ ಘೋಷಿಸಿದವು.
ಇಂದು ಒಂದು ದಿನದ ಮಟ್ಟಿಗೆ ರಜೆ ಘೋಷಣೆ ಮಾಡಿದ್ದು ನಾಳೆಯಿಂದ ಸರ್ಕಾರ ಜಾರಿ ಮಾಡಿರೋ ಪ್ರಕಾರ ಯುನಿಫಾರ್ಮ್ ಹಾಕಿಕೊಂಡು ಬರುವಂತೆ ಸೂಚಿಸಿದ್ದಾರೆ.
ಕೇಸರಿ ಶಾಲು ಧರಿಸಿ ಆಗಮಿಸಿದ ವಿದ್ಯಾರ್ಥಿಗಳು ಮಾಧ್ಯಮಗಳ ಜೊತೆ ಮಾತನಾಡಿ ಹಿಜಾಬ್ ಧರಿಸದೆ ವಿದ್ಯಾರ್ಥಿನಿಯರು ತರಗತಿಗೆ ಬಂದರೆ ಕೇಸರಿ ತೆಗೆದಿರುಸುತ್ತೇವೆ. ಸರ್ಕಾರದ ನಿಯಮ ಪಾಲಿಸುವುದಕ್ಕೆ ಸಿದ್ದವಾಗಿದ್ದೇವೆ. ಆದರೆ ಹಿಜಾಬ್ ಧರಿಸಿ ಕಾಲೇಜ್ ಬಂದರೆ ಕೇಸರಿಯನ್ನು ಧರಿಸಿಯೇ ತರಗತಿಗೆ ಹೋಗುತ್ತೇವೆ. ಎಲ್ಲರಿಗೂ ಸಮಾನತೆ ಬೇಕು. ಅವರಿಗೊಂದು ಕಾನೂನು, ನಮ್ಮಗೆ ಮಾತ್ರ ಕಾನೂನು ಅಂದರೆ ಅದಕ್ಕೆ ಒಪ್ಪಲು ಸಿದ್ದರಿಲ್ಲ ಎಂದು ಕೇಸರಿ ಶಾಲು ಧರಿಸಿ ಬರುತ್ತಿರುವ ವಿದ್ಯಾರ್ಥಿಗಳು ಪ್ರತಿಕ್ರಿಯೆ ನೀಡಿದ್ದಾರೆ.
ನಾಳೆ ಹೈಕೋರ್ಟ್ ಹಿಜಾಬ್ ಪ್ರಕರಣದ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಲಿದೆ.