ಉಡುಪಿ : ಮುಸ್ಲಿಂ ವಿದ್ಯಾರ್ಥಿನಿಯರು ಶಾಲಾ- ಕಾಲೇಜಿನಲ್ಲಿ ಹಿಜಾಬ್ ಧರಿಸುವುದನ್ನು ವಿರೋಧಿಸಿ ಕೆಲವು ಬಿಜೆಪಿ ಬೆಂಬಲಿತ ವಿದ್ಯಾರ್ಥಿ ಸಂಘಟನೆಗಳು ಕೇಸರಿ ಶಾಲು ಧರಿಸಿ ಕಾಲೇಜಿನಲ್ಲಿ ಪ್ರತಿಭಟನೆಗಳನ್ನು ನಡೆಸಿದ್ದರು. ಇದರ ಮಧ್ಯೆ ಉಡುಪಿಯ ಹಿಂದೂ ವಿದ್ಯಾರ್ಥಿನಿ ಸಂಹಿತಾ ಎಸ್. ಶೆಟ್ಟಿ ಅವರು ಬಿಜೆಪಿ ಬೆಂಬಲಿತ ವಿದ್ಯಾರ್ಥಿ ಸಂಘಟನೆಗಳ ಕೇಸರಿ ಶಾಲು ಪ್ರತಿಭಟನೆಯನ್ನು ವಿರೋಧಿಸಿ, ಹಿಜಾಬ್ ಧರಿಸಿದ ಮುಸ್ಲಿಂ ವಿದ್ಯಾರ್ಥಿಗಳ ಪರ ನಿಂತಿದ್ಧಾರೆ.
ಉಡುಪಿಯ ಮಹಾತ್ಮ ಗಾಂಧಿ ಸ್ಮಾರಕ (ಎಂಜಿಎಂ) ಕಾಲೇಜಿನ ವಿದ್ಯಾರ್ಥಿನಿ ಸಂಹಿತಾ ಓದುತ್ತಿರುವ ಕಾಲೇಜಿನಲ್ಲಿ ಇತ್ತೀಚೆಗೆ ಹಿಜಾಬ್ ವಿರುದ್ಧ ಭಾರೀ ಪ್ರತಿಭಟನೆಗಳು ನಡೆದಿದ್ದವು. ವಿದ್ಯಾರ್ಥಿಗಳು ಕೇಸರಿ ಪೇಟ ಮತ್ತು ಶಾಲುಗಳನ್ನು ಧರಿಸಿ ಫೆಬ್ರವರಿ 8 ರಂದು ತರಗತಿಗಳಿಗೆ ಅಡ್ಡಿಪಡಿಸಲು ಪ್ರಯತ್ನಿಸಿದ್ದರು.
ಪ್ರತಿದಿನ ಮುಂಜಾನೆ ತಮ್ಮ ಮನೆಯ ಅಂಗಳದಲ್ಲಿರುವ ತುಳಸಿ ಸಸಿಗೆ ಪೂಜೆ ಸಲ್ಲಿಸುವ ಸಂಹಿತಾ, ಉಡುಪಿಯ ತನ್ನ ಮನೆಯಲ್ಲಿರುವ ಕೃಷ್ಣನ ಮೂರ್ತಿಯನ್ನು ಸಹ ಪೂಜಿಸುತ್ತಾರೆ.
“ಹಿಜಾಬ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು ಕೆಲವೇ ದಿನಗಳ ಹಿಂದೆ ಕೇಸರಿ ಶಾಲುಗಳನ್ನು ಧರಿಸಲು ಪ್ರಾರಂಭಿಸಿದ್ದಾರೆ. ನನ್ನ ಮುಸ್ಲಿಂ ಸ್ನೇಹಿತೆಯರು ಹಲವಾರು ವರ್ಷಗಳಿಂದ ಹಿಜಾಬ್ ಧರಿಸುತ್ತಿದ್ದಾರೆ. ಹಿಜಾಬ್ ವಿರುದ್ದ ಕೇಸರಿ ಶಾಲು ಧರಿಸಿ ನಡೆಸುತ್ತಿರುವ ಪ್ರತಿಭಟನೆಯನ್ನು ನಾನು ಬೆಂಬಲಿಸುವುದಿಲ್ಲ. ಹಿಜಾಬ್ ಧರಿಸುವ ಮುಸ್ಲಿಂ ಹುಡುಗಿಯರ ಹಕ್ಕನ್ನು ನಾನು ಬೆಂಬಲಿಸುತ್ತೇನೆ,” ಎಂದು ಸಂಹಿತಾ ಪ್ರತಿಕ್ರಿಯಿಸಿದ್ದಾರೆ.
“ನಾನು ಕೇಸರಿ ಶಾಲಿನ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ನನ್ನ ಹಿಂದೂ ಸ್ನೇಹಿತರಿಗೆ ಹೇಳಿದೆ. ನಾನು ಮುಸ್ಲಿಂ ಹೆಣ್ಣುಮಕ್ಕಳೊಂದಿಗೆ ನಿಲ್ಲುತ್ತೇನೆ, ” ಎಂದು ಅವರು ಹೇಳಿದ್ದಾರೆ.
ದೇಶದ ಸಂವಿಧಾನವು ಧಾರ್ಮಿಕ ಹಕ್ಕನ್ನು ಎತ್ತಿಹಿಡಿಯುತ್ತದೆ ಎಂಬುದು ಸಂಹಿತಾ ಅವರ ನಂಬಿಕೆ. “ಧಾರ್ಮಿಕ ಹಕ್ಕು ಮೂಲಭೂತ ಹಕ್ಕಾಗಿದೆ. ಮುಸ್ಲಿಂ ವಿದ್ಯಾರ್ಥಿಗಳು ಧರಿಸುತ್ತಿರುವ ಹಿಜಾಬ್ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಯನ್ನು ದಯವಿಟ್ಟು ನಿಲ್ಲಿಸಿ ಎಂದು ಕೇಸರಿ ಶಾಲಿನ ಪ್ರತಿಭಟನಾಕಾರರಿಗೆ ನಾನು ಹೇಳಲು ಬಯಸುತ್ತೇನೆ. ಅವರು ಇತರ ಜನರ ಹಕ್ಕುಗಳನ್ನು ವಿರೋಧಿಸುವುದು ಸರಿಯಲ್ಲ,” ಎಂದು ಸಂಹಿತಾ ಹೇಳಿದ್ದಾರೆ.
“ವಾತಾವರಣ ತಿಳಿಗೊಳ್ಳಬೇಕು ಎಂದು ನಾನು ಬಯಸುತ್ತೇನೆ. ಜೊತೆಗೆ ನನ್ನ ಕಾಲೇಜಿನ ಮುಸ್ಲಿಂ ಹುಡುಗಿಯರು ಹಿಜಾಬ್ ಧರಿಸಿ ತಮ್ಮ ತರಗತಿಗಳಿಗೆ ಮರಳಲು ಅವಕಾಶ ಇರಬೇಕು ಎಂದು ನಾನು ಭಾವಿಸುತ್ತೇನೆ. “ವಿವಿಧತೆಯಲ್ಲಿ ಏಕತೆ” ಎಂಬ ಧ್ಯೇಯವಾಕ್ಯದ ಪರ ನಾನು ನಿಲ್ಲುತ್ತೇನೆ. ಇದು ಭಾರತದ ಬಹುತ್ವದ ಬಗ್ಗೆ ಪದೇ ಪದೇ ಪುನರಾವರ್ತಿತವಾಗುವ ನುಡಿಗಟ್ಟು” ಎಂದು ಸಂಹಿತಾ ಹೇಳಿದ್ದಾರೆ.