ವಿಶಾಖಪಟ್ಟಣಂ : ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಕರಾವಳಿಯ ದೈತ್ಯ ಮೀನು ಮಾರ್ಲಿನ್ ತನ್ನ ಈಟಿಯಂತಹ ಮೂತಿಯಿಂದ ಚುಚ್ಚಿ ಮೀನುಗಾರನೊಬ್ಬನನ್ನು ಕೊಂದು ಹಾಕಿದೆ.
ವಿಶಾಖಪಟ್ಟಣಂನ ದಕ್ಷಿಣದ ಪರವಾಡ ಪೊಲೀಸ್ ಠಾಣಾ ವ್ಯಾಪ್ತಿಯ ತೀರದಿಂದ 60 ನಾಟಿಕಲ್ ಮೈಲಿ ದೂರದ ಆಳ ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿದ್ದಾಗ ದುರಂತ ಸಂಭವಿಸಿದೆ.
ವಿಶಾಖಪಟ್ಟಣಂ ಜಿಲ್ಲೆಯ 40 ವರ್ಷದ ಮೊಳ್ಳಿ ಜೋಗಣ್ಣ ಎಂಬ ಮೀನುಗಾರ ಮೃತಪಟ್ಟಿದ್ದಾರೆ. ಮಂಗಳವಾರ ಸಂಜೆ 4 ಗಂಟೆಗೆ ಮೀನು ಹಿಡಿಯಲು ಆಳ ಸಮುದ್ರಕ್ಕೆ ಇಳಿದ ನಾಲ್ವರು ಮೀನುಗಾರರು, ಬುಧವಾರ ಬೆಳಗಿನ ಜಾವದವರೆಗೂ ಮೀನುಗಾರಿಕೆ ಮುಂದುವರಿಸಿದ್ದರು. ಬೆಳಿಗ್ಗೆ 7 ಗಂಟೆಯ ಹೊತ್ತಿಗೆ, ಮೀನುಗಾರರ ಬಲೆಗೆ ಸುಮಾರು 70 ಕೆಜಿ ತೂಕದ ಮಾರ್ಲಿನ್ (ಸ್ಥಳೀಯ ಮೀನುಗಾರರು ಇದನ್ನು ಕೊಮ್ಮು ಕೋಣಂ ಎಂದು ಕರೆಯುತ್ತಾರೆ) ಬಿದ್ದಿದೆ. ಈ ಮೀನನ್ನು ತಮ್ಮ ದೋಣಿಗೆ ಎಳೆಯಲು ಸಾಧ್ಯವಾಗದ ಕಾರಣ, ಜೋಗಣ್ಣ ಇತರರಿಗೆ ಸಹಾಯ ಮಾಡಲು ಸಮುದ್ರಕ್ಕೆ ಹಾರಿದ್ದರು. ಆಗ ದೊಡ್ಡ ಗಾತ್ರದ ಮೀನು ಜೋಗಣ್ಣನ ಹೊಟ್ಟೆಯ ಮೇಲೆ ಮೂತಿಯಿಂದ ದಾಳಿ ಮಾಡಿದೆ. ಪರಿಣಾಮ ಜೋಗಣ್ಣ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಜೋಗಣ್ಣ ಅವರು ಪರವಾಡ ಮಂಡಲದ ಮುತ್ಯಾಲಮ್ಮಪಾಲೆಂ ಪಂಚಾಯತ್‌ನ ಕರಾವಳಿ ಕುಗ್ರಾಮವಾದ ಜಾಲರಿಪೇಟ ನಿವಾಸಿಯಾಗಿದ್ದರು.